ಮೈಸೂರು: ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದ್ದು, ಮಳೆ ನೀರಿನ ಸಂಗ್ರಹವೇ ಇದಕ್ಕೆ ಮದ್ದು. ಈ ಬಗ್ಗೆ ಸಾರ್ವಜನಿಕ ಜಾಗೃತಿ ಬೇಕು ಎನ್ನುತ್ತಾರೆ ಪರಿಸರ ಪ್ರಿಯರು.
ಮೈಸೂರು ಮತ್ತೊಂದು ಮುಂಗಾರು ಮಳೆಯ ಸ್ವಾಗತಕ್ಕೆ ಸಿದ್ದವಾಗಿದೆ. ಆದರೆ ನಗರದ ಕೆಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಇಳಿಕೆ ಕಾಣುತ್ತಿದೆ. ಅದರಲ್ಲಿಯೂ ನಗರದ ಹೊರವಲಯಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ದಿನಬಳಕೆಯ ಉದ್ದೇಶಕ್ಕಾಗಿ ಕೊಳವೆಬಾವಿಗಳನ್ನು ತೆಗೆಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ವಿಜಯನಗರ, ಇಲವಾಲ. ಸಾತಗಳ್ಳಿ, ಬೋಗಾದಿ ಮೊದಲಾದ ಭಾಗಗಳಲ್ಲಿ ಅಂತರ್ಜಲ ಕುಸಿದಿದೆ. ಈ ಮೊದಲು 150–200 ಅಡಿಗಳ ಒಳಗೆ ನೀರು ಸಿಗುತ್ತಿತ್ತು. ಈಗ 350–400 ಅಡಿಗಳವರೆಗೂ ಬೋರ್‌ವೆಲ್ ಕೊರೆಯಿಸುವ ಮಟ್ಟಕ್ಕೆ ತಲುಪಿದೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2.20 ಲಕ್ಷಕ್ಕೂ ಅಧಿಕ ಕಟ್ಟಡಗಳಿವೆ. ದೊಡ್ಡ ಕಟ್ಟಡಗಳಿಗೆ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯಗೊಂಡು ದಶಕವೇ ಕಳೆದಿದ್ದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಪ್ರಯತ್ನ ಆಗಿಲ್ಲ. ಸಾರ್ವಜನಿಕರ ನಿರ್ಲಕ್ಷ್ಯದಿಂದಾಗಿ ಅಮೂಲ್ಯ ಜೀವಜಲ ಪೋಲಾಗಿ ಹರಿಯುತ್ತಿದೆ.
ಇಂದಿನ ತುರ್ತು: ‘ಮೈಸೂರು ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟ ಪ್ರಸ್ತುತ 10.23 ಮೀಟರ್‌ಗಳಷ್ಟಿದೆ. ಸದ್ಯ ನಾವು ಸುಸ್ಥಿತಿಯಲ್ಲಿ ಇದ್ದೇವೆ ಆದರೂ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ. ಅದನ್ನು ಎದುರಿಸಲು ಈಗಿನಿಂದಲೇ ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯವಾಗಬೇಕಿದೆ’ ಎನ್ನುತ್ತಾರೆ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿ ಪ್ರಸನ್ನಕುಮಾರ್.
‘2022ರಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಅಂತರ್ಜಲ ಮಟ್ಟ ಸರಾಸರಿ 8 ಮೀಟರ್‌ವರೆಗೂ ಏರಿಕೆ ಆಗಿತ್ತು. ಕಟ್ಟಡಗಳ ಮೂಲಕ ಮಳೆ ನೀರಿನ ಸಂಗ್ರಹ ಸಾಧ್ಯವಾದಲ್ಲಿ ಇದೇ ಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ಅವರು.
ಸಂಗ್ರಹ ಹೇಗೆ: ಪ್ರತಿ ಮನೆಯ ಮೇಲ್ಛಾವಣಿಯಲ್ಲಿ ಬೀಳುವ ಮಳೆ ನೀರನ್ನು ಶುದ್ಧೀಕರಿಸಿ ಹಿಡಿದಿಟ್ಟುಕೊಂಡು ಪುನರ್ ಬಳಕೆ ಇಲ್ಲವೇ ಕೊಳವೆಬಾವಿಗಳಿಗೆ ಮರುಪೂರಣ ಮಾಡಬಹುದಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲು ಹೆಚ್ಚೇನು ಖರ್ಚಾಗದು. ಕೇವಲ ₹2–3 ಸಾವಿರದಲ್ಲಿ ಸಿಗುವ ಫಿಲ್ಟರ್ ವ್ಯವಸ್ಥೆಯನ್ನು ಅಳವಡಿಸಿಕೊಂಡಲ್ಲಿ ಶುದ್ಧ ನೀರು ಸಿಗಲಿದೆ. ಇದನ್ನು ಕುಡಿಯುವುದಕ್ಕೆ ಸೇರಿದಂತೆ ಯಾವುದೇ ಉದ್ದೇಶಕ್ಕೆ ಬಳಸಬಹುದು. ಮನೆಯ ಕೊಳವೆಬಾವಿಗಳಿಗೆ ಪೈಪ್ ಮೂಲಕ ಮಳೆ ನೀರು ಇಂಗಿಸಬಹುದಾಗಿದೆ.
‘30X40 ಚದರ ಅಡಿ ವಿಸ್ತೀರ್ಣದ ಮನೆಯೊಂದರ ಮೇಲ್ಛಾವಣಿಯಿಂದ ವರ್ಷಕ್ಕೆ ಸರಾಸರಿ 1.8 ಲಕ್ಷ ಲೀಟರ್‌ಗಳಷ್ಟು ಮಳೆ ನೀರನ್ನು ಸಂಗ್ರಹಿಸಬಹುದು. ಕಟ್ಟಡ ದೊಡ್ಡದಾದಷ್ಟು ಈ ಪ್ರಮಾಣ ಹೆಚ್ಚುತ್ತದೆ. ಕೈಗಾರಿಕೆಗಳು ತಮ್ಮಲ್ಲಿ ಕಡ್ಡಾಯವಾಗಿ ಈ ವ್ಯವಸ್ಥೆ ಅಳವಡಿಸಿಕೊಂಡರೆ ತಮ್ಮ ಪಾಲಿನ ನೀರನ್ನು ತಾವೇ ಕೊಯ್ಲು ಮಾಡಬಹುದಾಗಿದೆ’ ಎನ್ನುತ್ತಾರೆ ಪ್ರಸನ್ನಕುಮಾರ್.
ಉಪಯೋಗಗಳೇನು?: ಮಳೆ ನೀರು ಸಂಗ್ರಹದಿಂದ ಹಲವು ಪ್ರತ್ಯಕ್ಷ ಹಾಗೂ ಪರೋಕ್ಷ ಉಪಯೋಗಗಳಿವೆ. ಅಂತರ್ಜಲ ಮಟ್ಟ ಸುಧಾರಣೆಯ ಜೊತೆಗೆ ಮನೆಗಳಲ್ಲಿನ ಕೊಳವೆಬಾವಿಗಳು ರೀಚಾರ್ಜ್ ಆಗಲಿದ್ದು, ಹೆಚ್ಚು ಕಾಲ ನೀರು ಸಿಗಲಿದೆ. ನೀರಿನ ಗುಣಮಟ್ಟವೂ ಸುಧಾರಣೆ ಆಗಲಿದ್ದು, ಅದರಲ್ಲಿನ ಗಡಸುತನ ಕಡಿಮೆಯಾಗಲಿದೆ.
‘ಮಳೆನೀರಿನಲ್ಲಿನ ಲವಣಾಂಶಗಳ ಪ್ರಮಾಣವು (ಟಿಡಿಎಸ್) ಪ್ರತಿ ಲೀಟರ್‌ಗೆ ಸರಾಸರಿ 50–100 ಮಿಲಿ ಗ್ರಾಂ.ನಷ್ಟಿದ್ದು, ಕುಡಿಯಲು ಅತ್ಯಂತ ಯೋಗ್ಯವಾಗಿರುತ್ತದೆ. ಅದೇ ಕೊಳವೆಬಾವಿಗಳಿಂದ ಹೊರತೆಗೆಯುವ ನೀರಿನಲ್ಲಿನ ಟಿಡಿಎಸ್ ಪ್ರಮಾಣವು ಕೆಲವೊಮ್ಮೆ 500–600 ಮಿಲಿ ಗ್ರಾಂವರೆಗೂ ಇದ್ದು, ಅಪಾಯಕಾರಿಯಾಗಿರುತ್ತದೆ’ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.
‘ಒಮ್ಮೆ ಸಂಗ್ರಹವಾದ ಮಳೆ ನೀರನ್ನು ಗಾಳಿ–ಬೆಳಕಿನ ಸಂಪರ್ಕ ಇಲ್ಲದ ಸಂಪ್‌ಗಳಲ್ಲಿ ಸಂಗ್ರಹಿಸಿದರೆ ಅದನ್ನು ಆರು ತಿಂಗಳವರೆಗೆ ಬಳಸಬಹುದಾಗಿದೆ. ನವೆಂಬರ್–ಡಿಸೆಂಬರ್‌ವರೆಗೆ ಮಳೆ ನೀರು ಹಿಡಿದಿಟ್ಟುಕೊಂಡು ಬೇಸಿಗೆಯಲ್ಲಿ ಅದನ್ನು ಸದುಪಯೋಗಪಡಿಸಿಕೊಳ್ಳಬಹುದು. ಮನೆಗಳನ್ನು ಕಟ್ಟುವಾಗಲೇ ಮಳೆ ನೀರಿನ ಸಂಗ್ರಹಕ್ಕೆ ಪ್ರತ್ಯೇಕ ಸಂಪ್‌ಗಳನ್ನು ನಿರ್ಮಿಸಿದರೆ ಮಳೆ ನೀರಿನ ಸದುಪಯೋಗ ಸಾಧ್ಯವಿದೆ’ ಎಂಬುದು ವಿಜ್ಞಾನಿಗಳ ಸಲಹೆ.
ಮೈಸೂರಿನ ಭೂ ರಚನೆಯು ಅಂತರ್ಜಲ ಮರುಪೂರಣಕ್ಕೆ ಪ್ರಶಸ್ತ್ಯವಾಗಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮಳೆ ನೀರು ಸಂಗ್ರಹಕ್ಕೆ ಮನಸ್ಸು ಮಾಡಬೇಕಿದೆಪ್ರಸನ್ನಕುಮಾರ್ ಹಿರಿಯ ಭೂವಿಜ್ಞಾನಿ ಜಿಲ್ಲಾ ಅಂತರ್ಜಲ ಕಚೇರಿ
ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿಯನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬರು ಈ ಪದ್ಧತಿ ಅಳವಡಿಸಿಕೊಂಡಲ್ಲಿ ಅಂತರ್ಜಲ ಮಟ್ಟ ವೃದ್ಧಿ ಆಗಲಿದೆಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ಸರ್ಕಾರಿ ಕಟ್ಟಡಗಳಲ್ಲಿ ಸಂಗ್ರಹಕ್ಕೆ ಸಿದ್ಧತೆ ಜಿಲ್ಲೆಯ ಸರ್ಕಾರಿ ಕಚೇರಿಗಳು ಶಾಲೆ–ಕಾಲೇಜು ಸೇರಿದಂತೆ ಸರ್ಕಾರಿ ಕಟ್ಟಡಗಳಲ್ಲಿ ಈ ಮುಂಗಾರಿನಿಂದಲೇ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಸರ್ಕಾರಿ ಕಟ್ಟಡಗಳಲ್ಲಿ ಈಗಾಗಲೇ ಮಳೆಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯವಾಗಿದ್ದರೂ ಬೆರಳೆಣಿಕೆಯ ಕಟ್ಟಡಗಳಲ್ಲಿ ಅಷ್ಟೇ ಈ ವ್ಯವಸ್ಥೆ ಇದೆ. ಹೀಗಾಗಿ ಉಳಿದೆಲ್ಲ ಕಟ್ಟಡಗಳಲ್ಲೂ ಈ ವ್ಯವಸ್ಥೆ ಜಾರಿಗೆ ಪ್ರಯತ್ನ ನಡೆದಿದೆ. ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಖಾಸಗಿ ಕಂಪನಿಗಳ ಸಿಎಸ್ಆರ್ ನಿಧಿ ಬಳಸಿಕೊಂಡು ಈ ವ್ಯವಸ್ಥೆ ಅಳವಡಿಕೆಗೆ ಸಹ ಚಿಂತನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.