ADVERTISEMENT

ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಕೈಬಿಡಲಿ

‘ದೆಹಲಿ ಚಲೋ’ದಲ್ಲಿ ರಾಜ್ಯದ ರೈತರು ಭಾಗಿ: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:57 IST
Last Updated 31 ಅಕ್ಟೋಬರ್ 2020, 4:57 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಮೈಸೂರು: ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆ ಸುಗ್ರೀವಾಜ್ಞೆಗಳ ಅವಧಿ ನ.3ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ಸುಗ್ರೀವಾಜ್ಞೆ ತರುವ ಆಲೋಚನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

ಕಾರ್ಪೊರೇಟ್‌ ಶಕ್ತಿಗಳ ಹಿತಾಸಕ್ತಿಗೆ ಬಲಿಯಾಗಿರುವ ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ತರುವುದಾಗಿ ಹೇಳುತ್ತಿದೆ. ರೈತನ ಮಗನಾಗಿ ನೀವು ಅಂಥ ಕೆಲಸಕ್ಕೆ ಮುಂದಾಗಬಾರದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.

ಸುಗ್ರೀವಾಜ್ಞೆ ಕೈಬಿಡದಿದ್ದರೆ ಐಕ್ಯ ಹೋರಾಟ ಸಮಿತಿಯಿಂದ ಇನ್ನಷ್ಟು ಪ್ರಬಲ ಹೋರಾಟ ನಡೆಸಲಾಗುವುದು. ಚಳಿಗಾಲದ ಅಧಿವೇಶನದ ಸಮಯದಲ್ಲಿ ಲಕ್ಷಕ್ಕೂ ಅಧಿಕ ಮಂದಿಯನ್ನು ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ನ.26, 27 ರಂದು ದೆಹಲಿ ಚಲೋ: ಕೇಂದ್ರ ಸರ್ಕಾರ ರೂಪಿಸಿರುವ ರೈತ ವಿರೋಧಿ ಮಸೂದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ನ.26 ಮತ್ತು 27 ರಂದು ದೇಶದ ವಿವಿಧ ಭಾಗಗಳ ರೈತರು ‘ದೆಹಲಿ ಚಲೋ’ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಕರೆಯ ಮೇರೆಗೆ ರಾಜ್ಯದಿಂದಲೂ ಸಾವಿರಾರು ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ನ.5 ರಂದು ದೇಶದಾದ್ಯಂತ ಹೆದ್ದಾರಿ ಬಂದ್‌ ಮಾಡಲು ಕರೆ ನೀಡಿದ್ದು, ರಾಜ್ಯದಲ್ಲಿ ಈ ಚಳವಳಿ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲು ನ.1ರಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.

‘ಬಿಜೆಪಿ ಸೋಲಿಸಲು ಮನವಿ’:ಶಿರಾ ಮತ್ತು ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮತದಾರರಿಗೆ ಮನವಿ ಮಾಡಲಾಗುವುದು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

‘ಶಿರಾದಲ್ಲಿ ಅ.28 ರಂದು ಈ ಸಂಬಂಧ ಸಭೆ ನಡೆಸಿ ಕರಪತ್ರ ಹಂಚಲಾಗಿದೆ. ಆರ್‌.ಆರ್‌.ನಗರದಲ್ಲಿ ಅ.31 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತ, ಕಾರ್ಮಿಕ ವಿರೋಧಿ ಮಸೂದೆಗಳನ್ನು ತಂದಿರುವುದಕ್ಕೆ ನಾವು ಬಿಜೆಪಿ ಸರ್ಕಾರವನ್ನು ವಿರೋಧಿಸುತ್ತಿದ್ದೇವೆ’ ಎಂದರು.

ಆರ್‌.ಆರ್‌.ನಗರದಲ್ಲಿ ನಟ ದರ್ಶನ್‌ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದಿರುವುದಕ್ಕೆ ಪ್ರತಿಕ್ರಿಯಿಸಿ, ‘ಇದರಿಂದ ದರ್ಶನ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.