ADVERTISEMENT

ಮೈಸೂರು | ‘ಧರ್ಮ; ಜನಕಲ್ಯಾಣಕ್ಕೆ ದುಡಿದ ಮಠ’

ರಾಜೇಂದ್ರ ಶ್ರೀ ಶತೋತ್ತರ ದಶಮಾನೋತ್ಸವ ಸಂಭ್ರಮ: ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:40 IST
Last Updated 30 ಆಗಸ್ಟ್ 2025, 5:40 IST
<div class="paragraphs"><p>ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌, ಸಿದ್ಧಲಿಂಗ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.  </p></div>

ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌, ಸಿದ್ಧಲಿಂಗ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.

   

ಮೈಸೂರು: ‘ನಾಡಿನ ಮಠಗಳು ಧರ್ಮ– ಸಂಸ್ಕೃತಿ ಉಳಿಸಿವೆ. ರಾಜೇಂದ್ರ ಶ್ರೀ ಅಂಥ ನೂರಾರು ಸ್ವಾಮೀಜಿಗಳು ಧಾರ್ಮಿಕ ಪರಂಪರೆ ಮುಂದುವರಿಸಿ ಜನ ಕಲ್ಯಾಣಕ್ಕೆ ದುಡಿದಿದ್ದಾರೆ’ ಎಂದು ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಹೇಳಿದರು. 

ಚಾಮುಂಡಿ ಬೆಟ್ಟದ ‍ಪಾದದಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. 

ADVERTISEMENT

‘ಸರ್ಕಾರವು ಒಂದು ವೈದ್ಯಕೀಯ ಕಾಲೇಜನ್ನು ನಿರ್ವಹಿಸುವುದೇ ಕಷ್ಟ. ಆದರೆ, ಸುತ್ತೂರು ಮಠವು 400ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದೆ. ಶಿಕ್ಷಣದ ಜೊತೆಗೆ ಜನರಲ್ಲಿ ಧಾರ್ಮಿಕ ಸದ್ಭಾವನೆ, ಸೌಹಾರ್ದ ಬೆಳೆಸುತ್ತಿದೆ. ರೈತರ ಸಬಲೀಕರಣವನ್ನೂ ಮಾಡುತ್ತಿದೆ’ ಎಂದು ಶ್ಲಾಘಿಸಿದರು.  

ನೋಡುವುದೇ ಸೊಗಸು: ‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಎಲ್ಲ ಮುಖಂಡರು ಇಲ್ಲಿ ಒಂದೇ ವೇದಿಕೆಯಲ್ಲಿರುವುದನ್ನು ನೋಡುವುದೇ ಸೊಗಸು. ಎಂಥ ಅಲೌಕಿಕ ವಾತಾವರಣವಿದು. ಧರ್ಮ ಉಳಿಸಿದ ಈ ಜಾಗಕ್ಕೆ ಸಚಿವನಾಗಿಯೋ, ಅತಿಥಿಯಾಗಿಯೋ ಬಂದಿಲ್ಲ. ದೇವರ ದಾಸನಂತೆ ಬಂದಿದ್ದೇನೆ’ ಎಂದು ಚೌಹಾಣ್ ಹೇಳಿದರು. 

‘ಎಲ್ಲರೂ ಸುಖವಾಗಿ ಇರಬೇಕೆಂದು ದೇಶದ ಧಾರ್ಮಿಕ ಪರಂಪರೆಯು ಎಂದಿಗೂ ಬಯಸಿದೆ. ಪ್ರತಿ ಜೀವಿಯ ಮೇಲೂ ಅಕ್ಕರೆಯಿದೆ. ಶಿವನ ಕುಟುಂಬವೇ ಅದಕ್ಕೆ ಉದಾಹರಣೆ. ವಿಶ್ವವೇ ಒಂದು ಕುಟುಂಬ ಎಂಬ ಉಕ್ತಿಯನ್ನು ಮಠಗಳು ಪಾಲಿಸಿವೆ. ಜಾತಿ– ಧರ್ಮದ ಭೇದವಿಲ್ಲದೇ ಜಗದಗಲಕ್ಕೂ ಸೇವಾ ಕಾರ್ಯ ವಿಸ್ತರಿಸುತ್ತಲೇ ಧರ್ಮ ರಕ್ಷಣೆಯನ್ನೂ ಮಾಡಿವೆ’ ಎಂದರು.   

ನಿಕಟ ಸಂಬಂಧ: ‘ಸುತ್ತೂರು ಮಠವು ರಾಜ್ಯವಲ್ಲದೇ ದೇಶಕ್ಕೆ ಅನ್ನ, ಅಕ್ಷರ, ಆರೋಗ್ಯ ಸೇವೆಯನ್ನು ನೀಡುತ್ತಿದೆ. ಅರಮನೆ– ಗುರುಮನೆಗೆ ನಿಕಟವಾದ ಸಂಬಂಧವಿದೆ. ತಾತ ಜಯಚಾಮರಾಜೇಂದ್ರ ಒಡೆಯರ್‌ ಅವರಿಗೂ ರಾಜೇಂದ್ರ ಶ್ರೀ ಅವರೊಂದಿಗೂ ಒಡನಾಟವಿತ್ತು’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಸ್ಮರಿಸಿದರು.

‘ಧಾರ್ಮಿಕ ಪರಂಪರೆಯು ರಕ್ಷಣೆ ಆಗಿದ್ದರೆ ಮಠಗಳಿಂದ ಮಾತ್ರ. ನರೇಂದ್ರ ಮೋದಿ ಸರ್ಕಾರ ಬಂದ ನಂತರ ಕೃಷಿ ಕ್ಷೇತ್ರದ ಬಜೆಟ್‌ ಹೆಚ್ಚಳವಾಗಿದೆ. 2013–14ರಲ್ಲಿ ₹ 27 ಸಾವಿರ ಕೋಟಿ ಬಜೆಟ್‌ ಇತ್ತು. ಇದೀಗ ಅದು ₹ 1.38 ಲಕ್ಷ ಕೋಟಿ ವಿಸ್ತಾರವಾಗಿದೆ. ಸರ್ಕಾರದ ಜೊತೆಗೆ ಸುತ್ತೂರು ಮಠವೂ ಕೃಷಿ ಕ್ಷೇತ್ರದ ಅಭಿವೃದ್ಧಿಗೂ ಕೊಡುಗೆ ಕೊಟ್ಟಿದೆ’ ಎಂದರು.

ಶಾಸಕರಾದ ಜಿ.ಟಿ.ದೇವೇಗೌಡ, ಎ.ಆರ್.ಕೃಷ್ಣಮೂರ್ತಿ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಎಚ್‌.ಎಂ.ಗಣೇಶ್‌ ಪ್ರಸಾದ್‌, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್‌ ಸದಸ್ಯ ಕೆ.ವಿವೇಕಾನಂದ, ಮುಖಂಡರಾದ ಸಿ.ಎಸ್‌.ನಿರಂಜನ್‌ಕುಮಾರ್, ಎಸ್‌.ಬಾಲರಾಜ್‌, ಶಿವಕುಮಾರ್, ತೋಂಟದಾರ್ಯ ಪಾಲ್ಗೊಂಡಿದ್ದರು.

ಜಯಂತಿ ಪಾಲ್ಗೊಂಡಿದ್ದ ಮಠದ ಭಕ್ತರು 

ಅನ್ನ, ಅಕ್ಷರ ಆರೋಗ್ಯ ನೀಡಿದ ಶ್ರೀ ರೈತರ ಸಬಲೀಕರಣಕ್ಕೂ ಕೊಡುಗೆ  ಧಾರ್ಮಿಕ ಸದ್ಭಾವನೆ ಬೆಳೆಸಿದ ಮಠ 

‘ಅರಿವಿನ ಕ್ರಾಂತಿ ನಡೆಸಿದ ರಾಜೇಂದ್ರಶ್ರೀ’  

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ‘ರಾಜೇಂದ್ರ ಶ್ರೀ ಕಾಶಿಗೆ ವಿದ್ಯಾಭ್ಯಾಸಕ್ಕೆ ಹೋಗಿದ್ದಾಗ ಅಲ್ಲಿನ ಗೌರಿಶಂಕರ ಸ್ವಾಮೀಜಿ ಅವರು ಮೈಸೂರಿನಲ್ಲಿದ್ದುಕೊಂಡೇ ಸಾವಿರಾರು ಮಂದಿಗೆ ಶಿಕ್ಷಣ ನೀಡಿರೆಂದು ಸಲಹೆ ನೀಡಿದ್ದರು. ಅದರಂತೆ ವಾಪಸಾಗಿ ಪ್ರಸಾದ ನಿಲಯ ಆರಂಭಿಸಿ ಲಕ್ಷಾಂತರ ಮಕ್ಕಳಿಗೆ ಅನ್ನ ಅಕ್ಷರ ನೀಡಿದರು’ ಎಂದು ಸ್ಮರಿಸಿದರು. ‘ಅರಮನೆ ಪಂಚಗವಿ ಮಠದ ಗೌರಿಶಂಕರ ಸ್ವಾಮೀಜಿ ಅವರು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಹಾಗೂ ರಾಜೇಂದ್ರ ಸ್ವಾಮೀಜಿ ಅವರನ್ನು ಸಮಾಜದ ಎರಡು ಕಣ್ಣುಗಳಂತೆ ಎಂದಿದ್ದರು. ಸುತ್ತೂರು ಸಿದ್ಧಗಂಗೆ ಚಿತ್ರದುರ್ಗ ಸಿರಿಗೆರೆ ಹುಬ್ಬಳ್ಳಿ ಬೆಳಗಾವಿಯ ಮಠಗಳು ಸ್ವಾತಂತ್ರ್ಯಪೂರ್ವದಲ್ಲೇ ಪ್ರಸಾದ ನಿಲಯಗಳನ್ನು ಆರಂಭಿಸಿ ಬಡವರ ಮಕ್ಕಳು ಶಿಕ್ಷಣ ಪಡೆಯಲು ಕಾರಣರಾವಾದವು’ ಎಂದರು.  ‘ದಾಸೋಹ ಮಾಡುವುದು ಕಷ್ಟವಾದಾಗ ರಾಜೇಂದ್ರ ಶ್ರೀ ತಮ್ಮ ಚಿನ್ನದ ಕರಡಿಗೆ ಮಾರಿ ಮಕ್ಕಳಿಗೆ ಅನ್ನವಿಕ್ಕಿದರು. ಅವರಿಗೆ ಜನ ಮನದ ಶಕ್ತಿಯೂ ಇತ್ತು. ಮೈಸೂರು– ಚಾಮರಾಜನಗರ ಭಾಗದಲ್ಲಿ ಶಿಕ್ಷಣ ಕ್ರಾಂತಿ ನಡೆಸಿದರು. ನಾಲ್ವಡಿ ಅವರಂತೆ ಮನೆ ಮನೆಯ ದೀಪವಾದರು’ ಎಂದು ಸ್ಮರಿಸಿದರು.

ಕೃತಿ ಬಿಡುಗಡೆ ನಾಟಕ ಪ್ರದರ್ಶನ 

‘ಕಾಯಕ ತಪಸ್ವಿ’ ‘ಸರ್ವದರ್ಶನ ಸಂಗ್ರಹ’ ಕೃತಿಗಳು ಹಾಗೂ ‘ಪ್ರಸಾದ’ ‘ಜೆಎಸ್‌ಎಸ್‌ ವಾರ್ತಾ‍ಪತ್ರ’ ವಿಶೇಷ ಸಂಚಿಕೆಗಳನ್ನು ಸಂಸದ ಯದುವೀರ್ ಬಿಡುಗಡೆ ಮಾಡಿದರು.  ಜೆಎಸ್‌ಎಸ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 125 ಮಂದಿ ಸೇವೆಯಿಂದ ಬಿಡುಗಡೆ ಪಡೆದ 62 ಜನರನ್ನು ಅಭಿನಂದಿಸಲಾಯಿತು. ಸೇವೆಯಲ್ಲಿರುವಾಗಲೇ ನಿಧನರಾದ 15 ನೌಕರರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು.  ‘ಶಿವರಾತ್ರಿ ರಾಜೇಂದ್ರ ಕಲಾಬಳಗ’ದ ಕಲಾವಿದರು ರಾತ್ರಿ 9ಕ್ಕೆ ‘ಪ್ರಭುಲಿಂಗಲೀಲೆ’ ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.