ADVERTISEMENT

ನಗರದೆಲ್ಲೆಡೆ ಕಂಪು ಸೂಸಿದ ಕನ್ನಡ

ಹಾರಾಡಿದ ಕನ್ನಡದ ಬಾವುಟ, ಮೊಳಗಿದ ಕನ್ನಡ ಗೀತೆಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:16 IST
Last Updated 1 ನವೆಂಬರ್ 2018, 19:16 IST
   

ಮೈಸೂರು: ನಗರದಲ್ಲಿ ಗುರುವಾರ ಎಲ್ಲೆಲ್ಲೂ ಕನ್ನಡದ ಕಂಪು ಸೂಸಿತು. ಹಲವೆಡೆ ನಡೆದ ರಾಜ್ಯೋತ್ಸವ ಕಾರ್ಯಕ್ರಮಗಳು ಕನ್ನಡಾಭಿಮಾನಿಗಳಲ್ಲಿ ಹೊಸತೊಂದು ಹುರುಪು ಮೂಡಿಸಿತು. ‘ಹಚ್ಚೇವು ಕನ್ನಡದ ದೀಪ’, ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’... ಮೊದಲಾದ ಕನ್ನಡದ ಗೀತೆಗಳು ಮೊಳಗಿದವು. ಕನ್ನಡ ಧ್ವಜಗಳು ಹಾರಾಡಿದವು.

ಕೇಂದ್ರೀಯ ಆಹಾರ ಸಂಶೋಧನಾಲಯ ಮತ್ತು ಕನ್ನಡ ಸಹೃದಯ ಬಳಗದ ವತಿಯಿಂದ ಸಿಎಫ್‌ಟಿಆರ್‌ಐನ ಚೆಲುವಾಂಬ ಅರಮನೆಯ ಮುಂಭಾಗ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್.ರಾಘವರಾವ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪಸಿಂಹ, ‘ಸಿಎಫ್‌ಟಿಆರ್‌ಐ ಆರಂಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಯಾವ ಸ್ಥಾನದಲ್ಲಿದೆ ಎಂದು ಆತ್ಮಾವಲೋಕನ ಮಾಡಿಕೊಂಡು, ಗತವೈಭವ ಮರಕಳಿಸುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕನ್ನಡದ ಬೆಳವಣಿಗೆಗೆ ತಮಿಳು ಮತ್ತು ತೆಲುಗು ಭಾಷಿಗರ ಕೊಡುಗೆಯೂ ಅಪಾರವಾಗಿದೆ. ಕನ್ನಡಕ್ಕೆ ಬಂದ 8 ಜ್ಞಾನಪೀಠ ಪ್ರಶಸ್ತಿಗಳ ಪೈಕಿ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ್ ಅವರ ಮನೆಮಾತು ಮರಾಠಿಯಾದರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮನೆಮಾತು ತಮಿಳು. ಕನ್ನಡ ಚಳವಳಿ ಆರಂಭಿಸಿದ ಮ.ರಾಮಮೂರ್ತಿ ಅವರದು ತೆಲುಗು ಭಾಷೆ. ಇಷ್ಟಾದರೂ ಅವರು ಕನ್ನಡ ಭಾಷೆಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ’ ಎಂದು ಶ್ಲಾಘಿಸಿದರು.

ಮೈಸೂರು ಸಿಟಿ ಯೂಸ್ಡ್ ಕಾರ್ ಡೀಲರ್ಸ್ ಅಸೋಸಿಯೇಷನ್‌ ವತಿಯಿಂದ ಭಾನವಿ ಆಸ್ಪತ್ರೆಯಲ್ಲಿ ರಾಜ್ಯೋತ್ಸವ ಪ್ರಯುಕ್ತ ನಡೆದ ‘ರಕ್ತನೀಡಿ ಕನ್ನಡ ಮಾತನಾಡಿ’ ವಿಶೇಷ ಕಾರ್ಯಕ್ರಮದಲ್ಲಿ 85 ಮಂದಿ ರಕ್ತದಾನ ಮಾಡಿದರು. ಮುಖ್ಯ ಅತಿಥಿಯಾಗಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಎನ್.ವಿಜಯ ಚಲುವರಾಜ್, ಸಂಘಟನೆಯ ಅಧ್ಯಕ್ಷ ಪ್ರದೀಪ್‌ಗೌಡ, ಗೌರವಾಧ್ಯಕ್ಷರಾದ ಕಣ್ಣನ್, ರವಿಕುಮಾರ್ ಹಾಗೂ ರಾಜುಗೌಡ, ಉಪಾಧ್ಯಕ್ಷ ಪ್ರಭು ಭಾಗವಹಿಸಿದ್ದರು.

ಮೈಸೂರು ಕನ್ನಡ ವೇದಿಕೆ ವತಿಯಿಂದ ವಿಶ್ವಮಾನವ ಉದ್ಯಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸಿದರು. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾವ್, ಅ.ನ.ಕೃಷ್ಣರಾವ್, ಡಿ.ವಿ.ಗುಂಡಪ್ಪ, ಕುವೆಂಪು, ದೇವರಾಜ ಅರಸು, ಮ.ರಾಮಮೂರ್ತಿ ಅವರ ಸಾಧನೆಗಳನ್ನು ನೆನಪು ಮಾಡಿಕೊಳ್ಳಲಾಯಿತು.

ಇತಿಹಾಸಕಾರ ‍ಪ್ರೊ.ಪಿ.ವಿ.ನಂಜರಾಜೇ ಅರಸು, ಸಮಾಜ ಸೇವಕ ಡಾ.ಶ್ರೀಷಾಭಟ್, ಆಯುರ್ವೇದ ತಜ್ಞ ಚಂದ್ರಶೇಖರ್, ಹಿರಿಯ ಹೋರಾಟಗಾರ ಎಂ.ವಿ.ವಿಶ್ವನಾಥ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಾಗತೀಕರಣದಿಂದ ಮರೆಯಾಗುತ್ತಿರುವ ಕನ್ನಡ ಪ್ರಜ್ಞೆ– ಆತಂಕ

ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಎಂ.ಕೃಷ್ಣಮೂರ್ತಿ ಮಾತನಾಡಿ, ‘ಜಾಗತೀಕರಣವು ವೈವಿಧ್ಯತೆಯನ್ನು ನಾಶಪಡಿಸುವ ಜತೆಗೆ ಕನ್ನಡ ಪ್ರಜ್ಞೆಯನ್ನೂ ನಾಶ ಮಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಎಲ್ಲ ಆಚರಣೆಗಳು ತಾಂತ್ರಿಕವಾಗಿ ಬದಲಾಗಿವೆ. ಮುಕ್ತವಾಗಿ ಮಾತನಾಡುವ, ಚರ್ಚಿಸುವ ಅವಕಾಶವೇ ಇಲ್ಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ, ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶು‍ಪಾಲ ಎಸ್.ಸೋಮಶೇಖರ್ ಭಾಗವಹಿಸಿದ್ದರು.

ಮೈಸೂರು ಇಟ್ಟಿಗೆಗೂಡು ಕನ್ನಡ ಸಮಿತಿ ವತಿಯಿಂದ ಚಾಮರಾಜೇಂದ್ರ ಮೃಗಾಲಯದ ಮುಂಭಾಗ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಜ್ಯೋತ್ಸವ ಅಚರಿಸಲಾಯಿತು. ಹಲವು ಆಟೊ ನಿಲ್ದಾಣಗಳಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಸಿಹಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.