
ಮೈಸೂರು: ರಾಮಕೃಷ್ಣ ವಿದ್ಯಾಶಾಲೆ ಮೈದಾನವು ಶನಿವಾರ ಸಂಜೆ ವಿದ್ಯಾರ್ಥಿಗಳ ಹೊನಲು ಬೆಳಕಿನ ಪ್ರದರ್ಶನದಲ್ಲಿ ಮಿಂದೆದ್ದಿತು. ನಡುವೆ ಸುರಿದ ಮಳೆಯಲ್ಲೂ ಶಿಸ್ತು ಬದ್ಧ ಪ್ರದರ್ಶನ ನೀಡಿದ 410ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರೇಕ್ಷಕರ ಕಣ್ಮನ ಸೆಳೆದರು.
ಆಶ್ರಮದ ಶತಮಾನೋತ್ಸವ ಹಾಗೂ ವಿದ್ಯಾಶಾಲೆಯ ಪದವಿ ಪೂರ್ವ ಕಾಲೇಜಿನ 73ನೇ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಕಲೆಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಿಸ್ತಿನ ಸಿಪಾಯಿಗಳಂತೆ ಬ್ಯಾಂಡ್ ವಾದ್ಯದೊಂದಿಗೆ ಸಾಗಿದ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ತ್ರಿಭುಜಾಕಾರದ ವಿದ್ಯುತ್ ದೀಪಗಳನ್ನು ಹಿಡಿದು ಪಂಚಿನ ಕವಾಯಿತು ರೀತಿಯಲ್ಲಿ ಹಲವು ಬಗೆಯ ಪ್ರದರ್ಶನಕ್ಕೆ ಪ್ರೇಕ್ಷಕರು ಹಾಗೂ ಪೋಷಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಯೋಗ, ಪಿರಮಿಡ್ ಪ್ರದರ್ಶನಗಳ ಭಂಗಿಗಳು ರೋಮಾಂಚನಗೊಳಿಸಿದವು.
ಜಿಮ್ನಾಸ್ಟಿಕ್ ಪ್ರದರ್ಶನದಲ್ಲಿ ಬ್ಯಾಂಬು ಪಥಸಂಚಲ, ಬೆಂಕಿ ಚಕ್ರದೊಳಗೆ ಹಾರುವ ಸಾಹಸ ದೃಶ್ಯ, ಚಿಟ್ಟೆ ಆಕೃತಿ ನೃತ್ಯ ಬಹುಸೊಗಸಾಗಿ ಕಾಣಿಸಿತು. ವಾದ್ಯ ಪ್ರದರ್ಶನದಲ್ಲಿ 65 ರೀತಿಯ ದೇಶಭಕ್ತಿಗೀತೆ, ಚಲಚಿತ್ರಗೀತೆ, ಇಂಗ್ಲೀಷ್ ಗೀತೆಗಳು ಪ್ರೇಕ್ಷಕರ ಕಿವಿಯನ್ನು ಇಂಪಾಗಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿದರು.
ರಾಮಕೃಷ್ಣ ವಿದ್ಯಾಶಾಲೆಯ ಶೈಕ್ಷಣಿಕ ಸೇವೆಯ ಅವಲೋಕನ ಮತ್ತು ರಾಮಕೃಷ್ಣ– ವಿವೇಕಾನಂದ ಭಾವಧಾರೆಗೆ ಮೈಸೂರು ರಾಜಮನೆತನದ ಕೊಡುಗೆ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ, ಪತ್ರದ ತುಣುಕುಗಳನ್ನು ಓದಲಾಯಿತು.
ಶಾಲೆಯ ಪ್ರತಿಭೆಗಳಾದ ಎಂ.ಎನ್.ತನ್ಮಯ್, ಶ್ರೀನಿವಾಸ್ ಆಚಾರ್ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಬಿ.ವಿ.ಆರ್.ಸುಬ್ರಹ್ಮಣ್ಯಂ, ರಾಜ್ಯ ಆರ್ಥಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಜರಿದ್ದರು.
‘ವಿವೇಕಾನಂದರ ಪ್ರಭಾವದಿಂದ ಅಭಿವೃದ್ಧಿ’
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ‘ಹಳೇ ಮೈಸೂರಿನ ವಾತವಾರಣ ಉಳಿದಿರುವ ಕೆಲವೇ ಜಾಗಗಳಲ್ಲಿ ರಾಮಕೃಷ್ಣ ಆಶ್ರಮವೂ ಒಂದು. ಅರಮನೆಗೂ ಸ್ವಾಮಿ ವಿವೇಕಾನಂದರಿಗೂ ಇದ್ದ ನಂಟಿನಿಂದಾಗಿ ಮೈಸೂರು ಸಾಮ್ರಾಜ್ಯದಲ್ಲಿ ಅನೇಕ ಬದಲಾವಣೆಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಲ್ಲೂ ಅವರ ಪ್ರಭಾವ ಕಾಣಬಹುದು’ ಎಂದರು. ‘ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಗೆ ಸ್ವಾಮೀಜಿಯೂ ಪ್ರೇರಣೆ. ಮೈಸೂರು ಕೂಡ ವಿಕಸಿತ ಕ್ಷೇತ್ರ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಬೇಕು. ಆಶ್ರಮ ಶಾಲೆಯೂ ಸಮಾಜದ ಅಧ್ಯಾತ್ಮ ವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.