ADVERTISEMENT

ರಂಗಾಯಣದಲ್ಲಿ ಬಾಗಿಲು ಬಿದ್ದು ಗಾಯ

ನಗರದಲ್ಲಿ ಮತ್ತೆ ಸಂಭವಿಸಿದ ಸರಗಳ್ಳತನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:24 IST
Last Updated 19 ಏಪ್ರಿಲ್ 2019, 19:24 IST

ಮೈಸೂರು: ಇಲ್ಲಿನ ರಂಗಾಯಣದ ಕಾರ್‌ ಶೆಡ್‌ಗೆ ಅಳವಡಿಸಿದ್ದ ಕಬ್ಬಿಣದ ಬಾಗಿಲು ಬಿದ್ದು ಕಾವಲುಗಾರ ಶೇಷು ಅವರು ಗಾಯಗೊಂಡಿದ್ದಾರೆ.

ಇವರು ಹೊರಗುತ್ತಿಗೆ ಆಧಾರದ ಮೇಲೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 15 ಅಡಿ ಎತ್ತರದ ತುಕ್ಕು ಹಿಡಿದ ಕಬ್ಬಿಣದ ಬಾಗಿಲು ಇವರ ಮೇಲೆ ಗುರುವಾರ ಸಂಜೆ ಉರುಳಿ ಬಿದ್ದಿದೆ. ಇದರಿಂದ ಇವರ ಕೈಮೂಳೆ ಮುರಿದಿದ್ದು, ತಲೆಗೆ ಪೆಟ್ಟು ಬಿದ್ದಿದೆ. ಸದ್ಯ, ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತುಕ್ಕು ಹಿಡಿದಿದ್ದ ಬಾಗಿಲನ್ನು ದುರಸ್ತಿಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದೇ ಘಟನೆ ಕಾರಣವಾಗಿದೆ. ಸದ್ಯ ನೂರಕ್ಕೂ ಅಧಿಕ ಮಕ್ಕಳು ಇಲ್ಲಿ ನಡೆಯುತ್ತಿರುವ ‘ಚಿಣ್ಣರ ಮೇಳ’ದಲ್ಲಿ ಭಾಗವಹಿಸಿದ್ದಾರೆ. ಕೂಡಲೇ ರಂಗಾಯಣವು ಎಚ್ಚೆತ್ತುಕೊಂಡು ದುರಸ್ತಿ ಕೆಲಸಗಳನ್ನು ಮಾಡಿಸಬೇಕು’ ಎಂದು ಹೆಸರು ಹೇಳಿಲಿಚ್ಛಿಸದ ರಂಗಾಯಣದ ಕಲಾವಿದರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಯಾದವಗಿರಿಯಲ್ಲಿ ಸರಗಳ್ಳತನ

ನಗರದ ಯಾದವಗಿರಿ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದು ಹೋಗುತ್ತಿದ್ದ ಒಂಟಿಕೊಪ್ಪಲಿನ ನಿವಾಸಿ ಭಾಗ್ಯಾ (38) ಎಂಬುವವರಿಂದ 50 ಗ್ರಾಂ ತೂಕದ ಚಿನ್ನದಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇವರು ಸಂಜೆ 6.15ರಲ್ಲಿ ದೇವಸ್ಥಾನಕ್ಕೆ ಹೋಗಿ ಇಬ್ಬರು ಸ್ನೇಹಿತೆಯರೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದಾಗ ಪಲ್ಸರ್‌ ಬೈಕ್‌ನಲ್ಲಿ ಬಂದ ಹೆಲ್ಮೆಟ್ ಧರಿಸಿದ ಇಬ್ಬರು ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂಜಾಟ; 8 ಜನರ ಬಂಧನ

ಇಲ್ಲಿನ ಹಿನಕಲ್‌ ಸಮೀಪ ಖಾಲಿ ಪ್ರದೇಶವೊಂದರಲ್ಲಿ ಶುಕ್ರವಾರ ಸಂಜೆ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನಡೆಸಿದ ವಿಜಯನಗರ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಜೂಜಾಟದಲ್ಲಿ ತೊಡಗಿಸಿದ್ದ ₹ 16,300 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.