ADVERTISEMENT

18ರಿಂದ ರಂಗಾಯಣದ ‘ರಂಗಪಯಣ’

ಸಂಚಾರಿ ರಂಗಘಟಕದ ಕಿರಿಯ ಕಲಾವಿದರಿಂದ 3 ನಾಟಕಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 10:31 IST
Last Updated 9 ನವೆಂಬರ್ 2019, 10:31 IST

ಮೈಸೂರು: ರಂಗಾಯಣದ ಸಂಚಾರಿ ರಂಗಘಟಕವು ನ.18ರಿಂದ ಡಿ.24ರವರೆಗೆ ‘ರಂಗಪಯಣ‌‌’ವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಮೂರು ನಾಟಕಗಳನ್ನು ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಸಂಚಾರಿ ರಂಗಘಟಕದ ಕಿರಿಯ ಕಲಾವಿದರು ಕೇರಳದ ಚಂದ್ರದಾಸನ್‌ ನಿರ್ದೇಶನದ ‘ಆರ್ಕೇಡಿಯಾದಲ್ಲಿ ಪಕ್‌’, ಚಿದಂಬರರಾವ್‌ ಜಂಬೆ ನಿರ್ದೇಶನದ ‘ಬೆಂದಕಾಳು ಆನ್‌ ಟೋಸ್ಟ್‌’ ಮತ್ತು ಶ್ರವಣಕುಮಾರ್‌ ನಿರ್ದೇಶನದ ‘ರೆಕ್ಸ್‌ ಅವರ್ಸ್‌– ಡೈನೋ ಏಕಾಂಗಿ ಪಯಣ’ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ. ಬಳ್ಳಾರಿಯ ರಾಘವ ರಂಗಮಂದಿರದಲ್ಲಿ ನ.18ರಿಂದ ‘ರಂಗಪಯಣ’ ಪ್ರಾರಂಭಗೊಳ್ಳಲಿದೆ ಎಂದು ರಂಗಾಯಣದ ಜಂಟಿ ನಿರ್ದೇ ಶಕ ಮಲ್ಲಿಕಾರ್ಜುನ ಸ್ವಾಮಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಯಚೂರು, ಬೀದರ್‌, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳು ಹಾಗೂ ಬಳ್ಳಾರಿಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲ್ಲೂಕು ಕೇಂದ್ರಗಳಲ್ಲಿ ನಾಟಕಗಳು ಪ್ರದರ್ಶನ ಕಾಣಲಿವೆ. ಈ ಪ್ರದರ್ಶನಗಳಲ್ಲದೆ, ಹಗಲಿನ ವೇಳೆಯಲ್ಲಿ ಶಾಲಾ–ಕಾಲೇಜುಗಳಲ್ಲೂ ಪ್ರದರ್ಶನ ಮಾಡಲು ಉದ್ದೇಶಿಸಲಾಗಿದೆ. ಆಸಕ್ತ ಶಾಲಾ–ಕಾಲೇಜುಗಳು ಸಂಪರ್ಕಿಸಬಹುದು ಎಂದರು.

ADVERTISEMENT

ರಂಗಾಯಣದ ಮಾಜಿ ನಿರ್ದೇಶಕ ಚಿದಂಬರರಾವ್‌ ಜಂಬೆ ಮಾತನಾಡಿ, ‘ಗಿರೀಶ ಕಾರ್ನಾಡರ ಬೆಂದಕಾಳು ಆನ್‌ ಟೋಸ್ಟ್‌ ನಾಟಕವು ಮರಾಠಿ ರಂಗಭೂಮಿಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕನ್ನಡದಲ್ಲಿ ಇದು ಪ್ರಸಿದ್ಧಿ ಪಡೆಯಲಿಲ್ಲ ಎಂಬ ಕೊರಗು ಕಾರ್ನಾಡರಿಗಿತ್ತು. ಈ ನಾಟಕ ಒಳ್ಳೆಯ ಪ್ರದರ್ಶನ ಕಾಣುವ ವಿಶ್ವಾಸವಿದೆ. ನಾಗಾಲೋಟದಲ್ಲಿ ಸಾಗುತ್ತಿರುವ ನಗರೀಕರಣದ ವಿವಿಧ ಮಜಲುಗಳನ್ನು ಮಾನವೀಯ ಸಂಬಂಧಗಳ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಕಾರ್ನಾಡರು ಮಾಡಿದ್ದಾರೆ. ಕಲಾವಿದರ ಅಭಿನಯಕ್ಕೂ ಸವಾಲೆಸೆದ ನಾಟಕವಿದು’ ಎಂದು ತಿಳಿಸಿದರು.

ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲ ಪ್ರಕಾಶ್‌ ಗರುಡ, ರಂಗ ನಿರ್ದೇಶಕ ಶ್ರವಣ್‌ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇಂದು ಮೊದಲ ಪ್ರದರ್ಶನ

‌‘ಬೆಂದಕಾಳು ಆನ್‌ ಟೋಸ್ಟ್‌’ ನಾಟಕದ ಮೊದಲ ಪ್ರದರ್ಶನ ರಂಗಾಯಣದ ಭೂಮಿಗೀತದಲ್ಲಿ ನ.9ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಸಂಚಾರಿ ರಂಗಘಟಕದ ಕಿರಿಯ ಕಲಾವಿದರು ಈ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಟಿಕೆಟ್‌ ದರ ₹50 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.