ಮೈಸೂರು: 3 ಸಾವಿರ ಡ್ರೋನ್‌ಗಳು ಬೆಳಕಿನ ಮಾಯಾಲೋಕ ತೆರೆದಿಟ್ಟರೆ.. ಅಶ್ವರೋಹಿ ದಳವು ಶರವೇಗದಲ್ಲಿ ನಡೆಸಿದ ‘ಟೆಂಟ್ ಪೆಗ್ಗಿಂಗ್’ ಸಾಹಸವು ತುದಿಗಾಲಿನಲ್ಲಿ ನಿಲ್ಲಿಸಿತು.. ಬೆಂಕಿಯಲ್ಲಿ ಪೊಲೀಸ್ ಪ‍್ರಶಿಕ್ಷಣಾರ್ಥಿಗಳು ಬರೆದ ಪಂಜಿನ ರಂಗೋಲಿಗೆ ಪ್ರೇಕ್ಷಕರು ಮನಸೋತರು..
ಬನ್ನಿಮಂಟಪದ ಮೈದಾನದಲ್ಲಿ ಗುರುವಾರ ನಡೆದ ‘ಪಂಜಿನ ಕವಾಯತು’ ನೋಡುಗರನ್ನು ಆಕರ್ಷಿಸಿತು. ಕಿಕ್ಕಿರಿದ್ದು ನೆರೆದಿದ್ದ 40 ಸಾವಿರಕ್ಕೂ ಅಧಿಕ ಮಂದಿಗೆ ವಿಸ್ಮಯ ಲೋಕ ತೋರಿಸಿ ಸಂತಸ ಭಾವ ಮೂಡಿಸಿತ್ತು. ಕೊನೆಯಲ್ಲಿ ಮೂಡಿದ ಬಾಣ– ಬಿರುಸಿನ ಚಿತ್ತಾರದೊಂದಿಗೆ ದಸರಾ ಮಹೋತ್ಸವಕ್ಕೆ ವೈಭವದ ತೆರೆಬಿತ್ತು.
ಗೌರವ ವಂದನೆ:
ಪಥ ಸಂಚಲನದ ಪರಿವೀಕ್ಷಣೆಗೆ ಸಶಸ್ತ್ರ ಮೀಸಲು ಪಡೆಯ ಕಮಾಂಡೆಂಟ್ ಕೆ.ಎನ್.ಸುರೇಶ್ ಅವರು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಂದ ಅನುಮತಿ ಪಡೆದರು. ನಂತರ ಪಥಸಂಚಲನದ ಗೌರವ ವಂದನೆಯನ್ನು ರಾಜ್ಯಪಾಲರು ಸ್ವೀಕರಿಸಿದರು. ನಂತರ ರಾಷ್ಟ್ರಗೀತೆ ಹಾಡುವಾಗ 21 ಕುಶಾಲತೋಪು ಸಿಡಿಸಲಾಯಿತು.
ಸಶಸ್ತ್ರ ಮೀಸಲು ಪಡೆ, ಅಶ್ವಾರೋಹಿ ಪಡೆ, ಎನ್‌ಸಿಸಿ ಭೂದಳ, ನೌಕಾದಳ, ಅಶ್ವಾರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ರೈಲ್ವೆ ರಕ್ಷಣಾ ದಳ, ಗೃಹರಕ್ಷಕ ದಳ, ಭಾರತೀಯ ಸೇವಾದಳ ಸೇರಿದಂತೆ ವಿವಿಧ ಪಡೆಗಳು ಇದ್ದವು. ಪಥಸಂಚಲನದ ನಂತರ ಗಾಯಕರಾದ ಚೈತ್ರಾ, ಸುಮಂತ್ ವಶಿಷ್ಠ ಮತ್ತು ತಂಡದವರು ‘ನಾಡಗೀತೆ’ ಹಾಡಿದರು.
ಡ್ರೋನ್ ಮಾಯಾಲೋಕ:
ಸೆಸ್ಕ್ ಆಯೋಜಿಸಿದ್ದ ಡ್ರೋನ್ ಪ್ರದರ್ಶನವು ಹರ್ಷೋದ್ಘಾರವನ್ನು ಮೊಳಗಿಸುವಂತೆ ಮಾಡಿತು. 15 ನಿಮಿಷ ಸ್ವರ್ಗೀಯ ಲೋಕವನ್ನು 3 ಸಾವಿರ ಡ್ರೋನ್‌ಗಳು ತೆರೆದಿಟ್ಟವು.
ಡಿಎನ್ಎ ತೋರಣದಿಂದ ಆರಂಭವಾದ ಚಿತ್ತಾರದ ಪಯಣ ನೋಡುಗರ ಹುಬ್ಬೇರಿಸಿತು. ಹಾಲುಹಾದಿ ಗ್ಯಾಲಕ್ಸಿ, ತಿರುಗುವ ಭೂಮಿಯಲ್ಲಿ ಹೊಳೆವ ತ್ರಿವರ್ಣದ ಭಾರತ ಭೂಪಟ, ಕೆಚ್ಚೆದೆಯ ಯೋಧ ದೇಶಪ್ರೇಮದ ಕಿಚ್ಚು ತಂದರೆ, ರಾಷ್ಟ್ರಪಕ್ಷಿ ನವಿಲು, ರಾಷ್ಟ್ರಪ್ರಾಣಿ ಹುಲಿ ವಿಸ್ಮಯ ಉಂಟುಮಾಡಿತು.
ಗ್ಯಾಂಜಸ್ ಡಾಲ್ಫಿನ್, ಹದ್ದು, ರಾಜ್ಯದ ಭೂಪಟದೊಂದಿಗೆ ಪಂಚ ಗ್ಯಾರಂಟಿ ಯೋಜನೆಗಳು ಖುಷಿ ನೀಡಿದವು. ಕೃಷ್ಣ, ಕಾವೇರಿ ಮಾತೆ, ಅಂಬಾರಿ ಆನೆ, ಚಾಮುಂಡೇಶ್ವರಿ ಚಿತ್ರವು ಭಕ್ತಿಯನ್ನು ಮೂಡಿಸಿತು. ಡ್ರೋನ್ ಬರೆದ ಬೆಳಕಿನ ರಂಗೋಲಿಯು ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿತು.
ಡಮರುಗ:
400ಕ್ಕೂ ಹೆಚ್ಚು ಮಂದಿ ವಾದ್ಯಗಾರರು ನುಡಿಸಿದ ‘ಡಮರುಗ’ ಪ್ರಸ್ತುತಿಯು ಎಲ್ಲರ ಗಮನ ಸೆಳೆಯಿತು. ಅರುಣ್ ಕುಮಾರ್ ನೇತೃತ್ವದಲ್ಲಿ ಚಂಡೆ, ಡ್ರಮ್ಸ್, ತಮಟೆ, ಡೊಳ್ಳು ಹಿಡಿದ ವಾದಕರು ಲಯಲೋಕ ಸೃಷ್ಟಿಸಿದರು. ವಯಲಿನ್‌ನಲ್ಲಿ ‘ವರಾಹ ರೂಪಂ’ ಗೀತೆಯು ಮೊಳಗಿತು. ನೃತ್ಯಪಟುಗಳು ಹೆಜ್ಜೆ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಸಚಿವರು ಹಾಗೂ ಶಾಸಕರು ಪಾಲ್ಗೊಂಡರು.
ರೋಮಾಂಚಕ ಟೆಂಟ್ ಪೆಗ್ಗಿಂಗ್
ಮೈಸೂರಿನ ಅಶ್ವರೋಹಿ ಪಡೆಯು ನಡೆಸಿದ ಟೆಂಟ್ ಪೆಗ್ಗಿಂಗ್ ಸಾಹಸ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ನಾಗಾಲೋಟದಿಂದ ಕುದುರೆ ಸವಾರಿ ಮಾಡುತ್ತಾ ಬಂದು ಭರ್ಜಿಯಿಂದ ಮೇಲಕ್ಕೆತ್ತುವ ಸಾಹಸವು ಶಿಳ್ಳೆ- ಚಪ್ಪಾಳೆ ಗಿಟ್ಟಿಸಿತು. ಎರಡು ತಂಡಗಳು ಒಗ್ಗಟ್ಟು ಪ್ರದರ್ಶಿಸಿದವು. ಪೊಲೀಸರಾದ ಶರಣಪ್ಪ ಡಿ.ಸಾಸನೂರ ಎಚ್.ಕೆ.ಸೋಮಣ್ಣ ಚಂದ್ರ ರುದ್ರಪ್ಪ ಮಹೇಶ್ ಸುರೇಶ್ ಮಳಲಿ ಸಂದೇಶ್ ಹೆಬ್ಬಾರ್ ಜಯ ಪ್ರಕಾಶ್ ಸಾಹಸ ಮೆರೆದರು. ಪಂಜಿನ ರಂಗೋಲಿ: ಸಿದ್ದನಗೌಡ ಪಾಟೀಲದ ಧಾರವಾಡದ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಬ್ಯಾಂಡ್ ಸಂಗೀತಕ್ಕೆ ತಕ್ಕಂತೆ ಉರಿವ ಪಂಜಿನಲ್ಲಿ ಕರ್ನಾಟಕ ‘ಸುಸ್ವಾಗತ’ ‘ಜೈ ಚಾಮುಂಡಿ..’ ‘ಗಾಂಧಿ ಜಯಂತಿ ಶುಭಾಶಯ’ ಪ್ಲಸ್ ಸ್ವಸ್ತಿಕ್ ಚರಕದ ಚಕ್ರ ನುಡಿ ಕನ್ನಡ ನಡೆ ಕನ್ನಡ ‘ಜೀವನದಿ ಕಾವೇರಿ’ ‘ನೇಗಿಲ ಯೋಗಿಗೆ ನಮನ’ ‘ಕರ್ನಾಟಕ ಪೊಲೀಸ್’ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಜೈ ಹಿಂದ್ ಎಂದು ಉರಿವ ಪಂಜುಗಳಲ್ಲಿ ಬರೆದರು. ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ‘ಮಡಿಕೇರಿ ಸಿಪಾಯಿ’ ‘ಸ್ವಾಭಿಮಾನದ ನಲ್ಲೆ’ ‘ನಾನಿನ್ನ ಮರೆಯಲಾರೆ’ ‘ಬಂದರೊ ಬಂದರು ಬಾವ ಬಂದರು’ ಮೊದಲದ ಗೀತೆಗಳನ್ನು ಬ್ಯಾಂಡ್ ನುಡಿಸಿತು.
ಆರೋಪ ಪಂಜಿನ ಕವಾಯತು ನೋಡಲು ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಜನರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ‘ಪಾಸ್ ಇದ್ದರೂ ಒಳಗೆ ಬಿಡದೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಲ್ಲದೇ ರಕ್ತ ಬರುವಂತೆ ತಲೆ ಹಾಗೂ ಮುಖಕ್ಕೆ ಹೊಡೆದು ದೌರ್ಜನ್ಯ ನಡೆಸಿದ್ದಾರೆ. ನ್ಯಾಯ ಬೇಕು’ ಎಂದು ಪ್ರತಿಭಟಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.