ADVERTISEMENT

ಅತ್ಯಾಚಾರ: ಮೈಸೂರು ನಗರದಲ್ಲಿ ಹಬ್ಬಿದ ಆತಂಕ

ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಪರಾಧ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 4:52 IST
Last Updated 26 ಆಗಸ್ಟ್ 2021, 4:52 IST
ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಲಲಿತಾದ್ರಿಪುರ ಗುಡ್ಡದ ಪ್ರದೇಶಕ್ಕೆ ಬುಧವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಲಲಿತಾದ್ರಿಪುರ ಗುಡ್ಡದ ಪ್ರದೇಶಕ್ಕೆ ಬುಧವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.   

ಮೈಸೂರು: ನಗರದಲ್ಲಿ ಸೋಮವಾರ ಚಿನ್ನಾಭರಣ ದರೋಡೆ ಪ್ರಕರಣದ ನೆನಪು ಹಸಿರಾಗಿರುವಾಗಲೇ, ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಮಹಿಳಾ ಸಮುದಾಯದಲ್ಲಿ ಆತಂಕವನ್ನೂ ಹೆಚ್ಚಿಸಿದೆ.

ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಎಲ್ಲೆಡೆ ಬಿಗಿ ತಪಾಸಣೆ ನಡೆಸುತ್ತಿರುವಾಗಲೇ ದುರ್ಘಟನೆ ನಡೆದಿರುವುದು ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ವೈಫಲ್ಯದ ಕಡೆಗೂ ಬೆರಳು ಮಾಡಿದೆ. ನಗರದ ಹೊರವಲಯದಲ್ಲಿ ಸಂಜೆಯ ನಂತರ ಮಹಿಳೆಯರು ಸಂಚರಿಸುವುದು ಅಪಾಯಕಾರಿ ಎಂಬ ಸಂದೇಶವನ್ನೂ ರವಾನಿಸಿದೆ.

2019ರ ಮೇ ತಿಂಗಳಿನಲ್ಲಿ ಲಿಂಗಾಂಬುಧಿ ಪಾಳ್ಯ ಸಮೀಪ ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ದುಷ್ಕರ್ಮಿಗಳು ಆಕೆಯ ಸ್ನೇಹಿತನ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಅಂಥದ್ದೇ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ADVERTISEMENT

ಚಾಮುಂಡಿಬೆಟ್ಟದ ಮೆಟ್ಟಿಲುಗಳ ಆಸುಪಾಸಿನಲ್ಲಿ, ಲಿಂಗಾಂಬುದಿ ಪಾಳ್ಯ, ವರ್ತುಲ ರಸ್ತೆ ಸೇರಿದಂತೆ ಹೊರವ
ಲಯದ ಬಹುತೇಕ ಭಾಗಗಳಲ್ಲಿ ಪೊಲೀಸರ ಗಸ್ತು ಸರಿಯಾಗಿ ನಡೆಯುತ್ತಿಲ್ಲ. ಏಕಾಂತ ಬಯಸಿ ಬರುವ ಯುವ ಜೋಡಿಗಳ ಮೇಲೆ ಪುಂಡರಿಂದ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಬಹುತೇಕರು ಪೊಲೀಸರ ಗಮನಕ್ಕೂ ತರುತ್ತಿಲ್ಲ. ಆಸ್ಪತ್ರೆಗೆ ದಾಖಲಾಗುವ ಹಂತಕ್ಕೆ ಬರುವಂತಹ ಗಾಯಗಳಾದಾಗ ಮಾತ್ರ ಪ್ರಕರಣಗಳು ಬಯಲಿಗೆ ಬರುತ್ತಿವೆ. ಹೊರವಲಯದ ಬಹುತೇಕ ಪ್ರದೇಶಗಳಲ್ಲಿ ಬೀದಿದೀಪಗಳಿಲ್ಲ. ಸಂಜೆಯಾದರೆ ಕತ್ಲು ಆವರಿಸುತ್ತದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲಲಿತಾದ್ರಿಪುರದ ನಿವಾಸಿ ಸಬಿತಾ ಉತ್ತಪ್ಪ, ‘ಅತ್ಯಾಚಾರ ನಡೆದಿರುವ ಪ್ರದೇಶದಲ್ಲಿ ಬೀದಿದೀಪ ಅಳವಡಿಸುವಂತೆ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಪತ್ರ ನೀಡಿದ್ದೆ. ಬೀದಿದೀಪ ಇದ್ದಿದ್ದರೆ ದುರ್ಘಟನೆ ನಡೆಯುತ್ತಿರಲಿಲ್ಲ’ ಎಂದು ವಿಷಾದಿಸಿದರು.

ದರೋಡೆ: ಮಹಾರಾಷ್ಟ್ರಕ್ಕೆ ತನಿಖಾ ತಂಡ: ಮೈಸೂರು: ವಿದ್ಯಾರಣ್ಯಾಪುರಂನಲ್ಲಿ ಸೋಮವಾರ ನಡೆದ ಆಭರಣ ಅಂಗಡಿ ದರೋಡೆಗೆ ಸಂಬಂಧಿಸಿ ಐವರು ಪೊಲೀಸರ ತಂಡವು ತನಿಖೆಗಾಗಿ ಮಹಾರಾಷ್ಟ್ರಕ್ಕೆ ತೆರಳಿದೆ. ಆರೋಪಿಗಳ ಪೈಕಿ ಕೆಲವರು ನಗರದಲ್ಲೇ ಉಳಿದಿದ್ದು, ಪರಾರಿಯಾಗಬಹುದು ಎಂಬ ಗುಮಾನಿಯಿಂದ ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದೆ.

‘ಆಭರಣದ ಅಂಗಡಿಗಳನ್ನು ವ್ಯವಸ್ಥಿತವಾಗಿ ದರೋಡೆ ಮಾಡುವ ಗುಂಪುಗಳು ಮಹಾರಾಷ್ಟ್ರದಲ್ಲಿವೆ. ದರೋಡೆಕೋರರು ಮಳಿಗೆಗಳಿಗೆ ಕೆಲಸಗಾರರಾಗಿ ಸೇರಿ ಅಂಗಡಿ ಕಾರ್ಯವೈಖರಿಯನ್ನು ಅರಿತು ಕೆಲವು ತಿಂಗಳ ನಂತರ ದರೋಡೆ ನಡೆಸುತ್ತಾರೆ. 2019ರಲ್ಲಿ ಬೆಂಗಳೂರಿನಲ್ಲಿ ಸಾಮ್ರಾಟ್ ಆಭರಣದ ಮಳಿಗೆಯಲ್ಲೂ ಮಹಾರಾಷ್ಟ್ರದ ಗ್ಯಾಂಗ್‌ ದರೋಡೆ ಯತ್ನ ನಡೆಸಿತ್ತು. ಅಲ್ಲೂ ರಿವಾಲ್ವರ್‌ ಬಳಕೆಯಾಗಿತ್ತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.