ADVERTISEMENT

ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಂತಿಲ್ಲ: ಆರ್‌.ಅಶೋಕ್‌ ಆರೋಪ

ಮಂಡ್ಯ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 11:10 IST
Last Updated 23 ಅಕ್ಟೋಬರ್ 2018, 11:10 IST
ಕೆ.ಆರ್.ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆರ್.ಅಶೋಕ್ ಮಾತನಾಡಿದರು
ಕೆ.ಆರ್.ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆರ್.ಅಶೋಕ್ ಮಾತನಾಡಿದರು   

ಕೆ.ಆರ್.ನಗರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಐದು ತಿಂಗಳು ಕಳೆದರೂ ರೈತರ ಆತ್ಮಹತ್ಯೆ ಇನ್ನೂ ನಿಂತಿಲ್ಲ. ಮಂಡ್ಯ ಜಿಲ್ಲೆಯಲ್ಲೇ 20 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಂಡ್ಯ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಉಸ್ತುವಾರಿ ಆರ್‌.ಅಶೋಕ್‌ ಹೇಳಿದರು.

ಮಂಡ್ಯ ಲೋಕಸಭೆ ಉಪ ಚುನಾವಣೆ ಸಂಬಂಧ ಇಲ್ಲಿನ ರೇಡಿಯೊ ಮೈದಾನದಲ್ಲಿ ಅ.23ರಂದು ಬಿಜೆಪಿ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆ ಪ್ರಯುಕ್ತ ಸೋಮವಾರ ನಡೆದ ‘ಕಾರ್ಯಕರ್ತರ ಪೂರ್ವಭಾವಿ ಸಭೆ’ಯಲ್ಲಿ ಅವರು ಮಾತನಾಡಿದರು.

ಸಾಲ ಮನ್ನಾ ಘೋಷಣೆ ಕೇವಲ ಬೂಟಾಟಿಕೆಯಾಗಿದೆ. ಸರ್ಕಾರ ಮಾಡಿರುವ ಕಾನೂನುಗಳಿಂದ ಸಾಲಮನ್ನಾದ ಪ್ರಯೋಜನರೈತರಿಗೆ ತಲುಪುತ್ತಿಲ್ಲ ಎಂದರು.

ADVERTISEMENT

ಈ ಸರ್ಕಾರ ಸುಭದ್ರವಾಗಿದೆ ಎಂದು ಯಾರಿಗೂ ಅನಿಸುತ್ತಲೇ ಇಲ್ಲ. ಜನರ ಪರವಾಗಿರುವ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ದಿವಾಳಿ ಆಗಿರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು.

ಮಂಡ್ಯ ಲೋಕಸಭೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಬಗ್ಗೆ ಕೆಟ್ಟ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಯಾವುದೇ ಕೆಲಸ ಮಾಡುತ್ತಿಲ್ಲ. ಜೆಡಿಎಸ್‌ನಲ್ಲೂ ಅಭ್ಯರ್ಥಿಯನ್ನು ವಿರೋಧಿಸಲಾಗುತ್ತಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಲು ಇದೊಂದು ಒಳ್ಳೆಯ ಅವಕಾಶವಾಗಿದೆ ಎಂದರು.

ಸಮ್ಮಿಶ್ರ ಸರ್ಕಾರ ಬಹಳಷ್ಟು ದಿನ ಉಳಿಯುವುದಿಲ್ಲ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ. ರಾಜ್ಯದಲ್ಲಿ ಜೆಡಿಎಸ್ ವಿರೋಧಿ ಅಲೆ ಇದೆ. ಅದು ಚುನಾವಣೆ ನಂತರವಷ್ಟೇ ಕಾಣುತ್ತದೆ ಎಂದು ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ರಮೇಶ್ ಕುಮಾರ್, ವಕ್ತಾರ ಎಚ್.ಪಿ.ಗೋಪಾಲ್, ಮುಖಂಡರಾದ ಸಾ.ರಾ.ರಮೇಶ್, ಕಗ್ಗುಂಡಿ ಕುಮಾರ್, ಜಯರಾಮೇಗೌಡ, ಮಾರ್ಕಂಡಯ್ಯ, ಕುಪ್ಪೆ ಪ್ರಕಾಶ್, ಸೋಮಶೇಖರ್, ಪ್ರಭಾಕರ್ ಜೈನ್, ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.