ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ: ಪ್ರಾದೇಶಿಕ ಭಾಷೆಗಳ ಬಲವರ್ಧನೆಗೆ ಆದ್ಯತೆ –ಪ್ರಸಾದ್

ಸಿಐಐಎಲ್ 54ನೇ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 7:51 IST
Last Updated 17 ಜುಲೈ 2022, 7:51 IST
ಸಿಐಐಎಲ್ 54ನೇ ಸಂಸ್ಥಾಪನಾ ದಿನಾಚರಣೆ
ಸಿಐಐಎಲ್ 54ನೇ ಸಂಸ್ಥಾಪನಾ ದಿನಾಚರಣೆ   

ಮೈಸೂರು: ‘ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ–2020)ಯಲ್ಲಿ ಕನ್ನಡ, ತಮಿಳು, ತೆಲುಗು ಸೇರಿದಂತೆ ಪ್ರಾದೇಶಿಕ ಭಾಷೆಗಳ ಬಲವರ್ಧನೆಗೆ ಆದ್ಯತೆ ನೀಡಲಾಗುವುದು’ ಎಂದು ಕೇಂದ್ರದ ಉನ್ನತ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ನೀತಾ ಪ್ರಸಾದ್ ತಿಳಿಸಿದರು.

ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದಲ್ಲಿ ಭಾನುವಾರ ನಡೆದ 54ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ವರ್ಚುವಲ್‌ ವೇದಿಕೆಯಲ್ಲಿ ಅವರು ಮಾತನಾಡಿದರು.

‘ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಬಹಳಷ್ಟು ಕೆಲಸಗಳು ನಡೆದಿವೆ. ‘ಏಕ್‌ ಭಾರತ್‌, ಶ್ರೇಷ್ಠ ಭಾರತ್‌’ ಯೋಜನೆಯಲ್ಲಿ ಪ್ರತಿ ರಾಜ್ಯದ ಸಂಸ್ಕೃತಿಯನ್ನು ಪರಸ್ಪರ ಪರಿಚಯಿಸುವುದು ಮತ್ತು ಅವುಗಳ ನಡುವೆ ಸಂಬಂಧ ಸುಧಾರಿಸಲಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಆಗಿದೆ. ಈ ವಿಷಯದಲ್ಲಿ ಭಾಷೆಗಳ ಅಂತರಶಿಸ್ತೀಯ ಅಧ್ಯಯನ ಅಗತ್ಯವಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಮೈಸೂರಿನ ಸಿಐಐಎಲ್‌ ಪಾತ್ರ ದೊಡ್ಡದಾಗಿದ್ದು, ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಬಲಪಡಿಸುವ ಉದ್ದೇಶ:‘ಭಾಷೆಗಳ ಮೂಲಕ ದೇಶದ ಏಕತೆ–ಸಮಗ್ರತೆ ಕಾಪಾಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಪ್ರಾದೇಶಿಕ ಭಾಷೆಗಳ ಕೇಂದ್ರಗಳನ್ನು ಬಲಪಡಿಸ ಲು ಉದ್ದೇಶಿಸಲಾಗಿದೆ. ಸಂಸ್ಕೃತ ಸೇರಿದಂತೆ ದೇಶದ ಎಲ್ಲ ಭಾಷೆಗಳ ವಿಕಾಸಕ್ಕೂ ಕ್ರಮ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಸಿಐಐಎಲ್‌ನಂತಹ ಸಂಸ್ಥೆಗಳನ್ನು ಸಶಕ್ತಗೊಳಿಸಲಾಗುತ್ತದೆ’ ಎಂದರು.

ಸಿಐಐಎಲ್ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದ ಸಂಸ್ಥಾಪಕ ನಿರ್ದೇಶಕ ಪ್ರೊ.ಡಿ.ಪಿ.ಪಟ್ಟನಾಯಕ, ‘ಭಾಷಾ ವಿಜ್ಞಾನದ ಬೆಳವಣಿಗೆಯ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಏಜೆನ್ಸಿಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಮಹತ್ವದ ಕೆಲಸವನ್ನು ಸಿಐಐಎಲ್‌ ಮಾಡುತ್ತಿರುವುದು ಶ್ಲಾಘನೀಯ’ ಎಂದು ತಿಳಿಸಿದರು.

‘ಶಿಕ್ಷಣ ಸಚಿವಾಲಯದ ಭಾಗವಾದ ಸಿಐಐಎಲ್‌ ಅನ್ನು ಕೇಂದ್ರೀಯ ವಿಶ್ವವಿದ್ಯಾಲಯವನ್ನಾಗಿಸುವ ಅಗತ್ಯವಿದೆ. ಕೇಂದ್ರವು ಸಿಐಇಎಫ್‌ಎಲ್ ಹಾಗೂ ಹಲವು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯಗಳನ್ನು ರೂಪಿಸಿದೆ. ಅಂತೆಯೇ, ಸಿಐಐಎಲ್‌ ಅನ್ನೂ ಪರಿಗಣಿಸಬೇಕು. ಭಾರತದ ಯಾವುದೇ ವಿಶ್ವವಿದ್ಯಾಲಯಗಳಲ್ಲೂ ಮುಂಡಾ ಮತ್ತು ಸಿನೋ ಟಿಬೆಟಿಯನ್ ಭಾಷಾವಿಜ್ಞಾನದ ಅಧ್ಯಯನ ಕೇಂದ್ರವಿಲ್ಲ. ಇಂಡೋ–ಆರ್ಯನ್‌ ಹಾಗೂ ದ್ರಾವಿಡಿಯನ್‌ ಭಾಷೆಗಳಿಗೂ ಕೇಂದ್ರಗಳಿಲ್ಲ. ಸಿಐಐಎಲ್‌ ಅನ್ನು ಇಲಾಖೆಯಾಗಿ ಉಳಿಸಿಕೊಳ್ಳಲು ಕೇಂದ್ರಕ್ಕೆ ಇಷ್ಟವಿಲ್ಲದಿದ್ದರೆ, ಪರ್ಯಾಯಗಳೂ ಇವೆ. ‘ರಾಷ್ಟ್ರೀಯ ಮಾನ್ಯತೆಯ ಕೇಂದ್ರ’ವನ್ನಾಗಿಸುವುದು ಪರ್ಯಾಯಗಳಲ್ಲಿ ಒಂದಾಗಿದೆ. ಸಂಬಂಧಿಸಿದವರು ಇತ್ತ ಗಮನಹರಿಸಬೇಕು’ ಎಂದರು.

‘ಭಾರತೀಯ ಭಾಷೆಗಳ ಭಂಡಾರ’ ಸ್ಥಾಪನೆ
‘ಸಂಸ್ಥೆಯಿಂದ ವಿವಿಧೆಡೆ 7 ಪ್ರಾದೇಶಿಕ ಭಾಷಾ ಕೇಂದ್ರಗಳನ್ನು ಸ್ಥಾಪಿಸಿ, ದೇಶದ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ತ್ರಿಭಾಷಾ ಸೂತ್ರದ ಮೂಲಕ ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಸಮನ್ವಯದ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ತಿಳಿಸಿದರು.

‘ಎನ್‌ಇಪಿ ಅನುಷ್ಠಾನ ಹಾಗೂ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಭಾಷಾ ಕಲಿಕೆ ಕೋರ್ಸ್‌ಗಳನ್ನು ಪುನರ್‌ ರೂಪಿಸುವ ಅಗತ್ಯವಿದೆ. ಸಂಸ್ಥೆಯು ‘ಭಾರತೀಯ ಭಾಷಾ ಸಂಗಮ’ದ ಹೆಸರಿನಲ್ಲಿ ‘ಭಾರತೀಯ ಭಾಷೆಗಳ ಭಂಡಾರ’ ರೂಪಿಸುವ ಯೋಜನೆ ಹಾಕಿಕೊಂಡಿದೆ. ಅದರಲ್ಲಿ 160 ಭಾಷೆಗಳಿಗೆ ಸಂಬಂಧಿಸಿದ ಕ್ಷೇತ್ರ ಕಾರ್ಯದ ದತ್ತಾಂಶವಿರಲಿದೆ. ಅಪಾರ ಪುಸ್ತಕಗಳ ನಿಧಿಯನ್ನು ಒಳಗೊಂಡಿರಲಿದೆ. ಭಾಷಾವಿಜ್ಞಾನ ಕುರಿತ ಸಂಪನ್ಮೂಲವು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುವುದು’ ಎಂದು ವಿವರಿಸಿದರು.

‘ಪ್ರಾಚೀನ ಕಾಲದಿಂದಲೂ ದೇಶ ಹಾಗೂ ವಿದೇಶಗಳಲ್ಲಿ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ‘ಭಾರತೀಯ ಭಾಷಾಧ್ಯಯನದ ನಿರ್ಮಾತೃ’ಗಳ ಕುರಿತು ಸರಣಿ ಕಾರ್ಯಕ್ರಮ ಆರಂಭಿಸಲಾಗುವುದು. ಭಾಷಾ ವಿಜ್ಞಾನ, ಭಾಷೆ ಹಾಗೂ ಸಾಹಿತ್ಯದ ವಿಷಯದಲ್ಲಿ ಹಲವು ಎಂ.ಎ., ಪಿಎಚ್.ಡಿ ಕೋರ್ಸ್‌ಗಳು ಹಾಗೂ ಪೋಸ್ಟ್ ಡಾಕ್ಟರಲ್‌ ಫೆಲೋಶಿಪ್‌ಗಳ ಆರಂಭಕ್ಕೂ ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಭಾಷಾತಜ್ಞ ಚಾಮಕೃಷ್ಣ ಶಾಸ್ತ್ರಿ, ಪ್ರೊ.ಅವದೇಶ್‌ಕುಮಾರ್‌ ಮಿಶ್ರಾ, ಪ್ರೊ.ರಾಜೇಶ್ ಸಚ್‌ದೇವ್ ಮಾತನಾಡಿದರು. ಸಂಸ್ಥೆಯ ಸಹಾಯಕ ನಿರ್ದೇಶಕ (ಪ್ರಭಾರ) ಡಾ.ನಾರಾಯಣಕುಮಾರ್‌ ಚೌಧರಿ ನಿರೂಪಿಸಿದರು. ಡಾ.ತಾರಿಕ್ ಖಾನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.