ಮೈಸೂರು: ‘ರಾಜ್ಯವು ಶೈಕ್ಷಣಿಕ, ಅರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಮಠಗಳ ಕೊಡುಗೆ ಅಪಾರ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಇಲ್ಲಿನ ಕೆ.ಆರ್.ಮೊಹಲ್ಲಾದ ಹುಲ್ಲಿನಬೀದಿಯಲ್ಲಿ ಭಾನುವಾರ ಗುರುಮಲ್ಲೇಶ್ವರ ದಾಸೋಹ ಮಠ ಹಾಗೂ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಮಠದ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ₹25 ಲಕ್ಷ ಅನುದಾನ ನೀಡಿದ್ದರು. ಈ ಭಾಗದಲ್ಲಿ ಸುತ್ತೂರು ಸೇರಿದಂತೆ ಅನೇಕ ಮಠಗಳು ಜನರ ಅಭಿವೃದ್ಧಿಗೆ ಶ್ರಮವಹಿಸಿವೆ’ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಆಧ್ಯಾತ್ಮಿಕ ಕ್ಷೇತ್ರಕ್ಕೆ ಭಾರತದ ಕೊಡುಗೆ ಪ್ರಮುಖವಾಗಿದೆ. ಶಿವಮೊಗ್ಗ ಮೂಲದ ಗುರುಮಲ್ಲೇಶ ಸ್ವಾಮೀಜಿಯು ಭಕ್ತರ ಸಮಸ್ಯೆ ನಿವಾರಣೆ ಹಾಗೂ ದಾಸೋಹ ಕಾಯಕಕ್ಕೆ ಬದ್ಧರಾಗಿ ದೇವನೂರಿನಲ್ಲಿ ಮಠವನ್ನು ಸ್ಥಾಪಿಸಿದರು. ಶರಣ ತತ್ವ ಅನುಸರಿಸಿದರು’ ಎಂದು ಸ್ಮರಿಸಿದರು.
ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಕ್ಷಣ ಇಂದಿನ ತುರ್ತು, ಇದಕ್ಕೆ ಮಠಗಳ ಸಹಕಾರ ಅಗತ್ಯ’ ಎಂದರು.
ಗುರುವಂದನೆ ಸ್ವೀಕರಿಸಿದ ದೇವನೂರಿನ ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತ ಸ್ವಾಮೀಜಿ, ‘ನಮ್ಮ ಮಠದಲ್ಲಿ ಭಕ್ತರ ಸಹಕಾರದಿಂದಲೇ ಎಲ್ಲವೂ ಆಗುತ್ತಿದೆ. ಜನರ ಸೇವೆಗೆ ಹೆಚ್ಚು ಅವಕಾಶ ದೊರೆತರೆ ಅದೇ ಸಾರ್ಥಕತೆ’ ಎಂದರು.
ಹುಲ್ಲಿನಬೀದಿ ಮಠದ ಚಂದ್ರಶೇಖರ ಸ್ವಾಮೀಜಿ, ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ, ಮುಖಂಡರಾದ ಎಂ.ಕೆ.ಸೋಮಶೇಖರ್, ಎಲ್.ನಾಗೇಂದ್ರ, ಎಚ್.ವಿ.ರಾಜೀವ್, ಪ್ರದೀಪ್‌ಕುಮಾರ್, ಬಿ.ವಿ.ಮಂಜುನಾಥ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಬಸವರಾಜ್, ಮಂಗಳಾ ಸೋಮಶೇಖರ್, ಸೌಮ್ಯಾ ಉಮೇಶ್ ಹಾಜರಿದ್ದರು.
ಮಠದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹5 ಲಕ್ಷ ಅನುದಾನ ನೀಡಲಾಗುವುದು.-ಟಿ.ಎಸ್.ಶ್ರೀವತ್ಸ,ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.