ಸಿದ್ದರಾಮಯ್ಯ
ಮೈಸೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಎಡಗೈ ಹಾಗೂ ಬಲಗೈ ಸಮುದಾಯದವರಿಗೆ ಸಮನಾಗಿ ಹಂಚಿಕೆ ಮಾಡುವ ಮೂಲಕ 45 ವರ್ಷಗಳ ಹೋರಾಟಕ್ಕೆ ತೆರೆ ಎಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾನುವಾರ ವಿಮಾನನಿಲ್ದಾಣ ಬಳಿಯ ಮೈಸೂರು–ಊಟಿ ಹೆದ್ದಾರಿ ಬದಿಯಲ್ಲಿ ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
‘ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಿದ ಸಿದ್ದರಾಮಯ್ಯ ಅವರಿಗೆ ಜಯವಾಗಲಿ’ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಾದುದು ನಮ್ಮ ಜವಾಬ್ದಾರಿ. ಪರಿಶಿಷ್ಟ ಜಾತಿ ಸಮುದಾಯದಲ್ಲಿ ಯಾರಿಗೂ ಅನ್ಯಾಯ ಆಗದಂತೆ ಒಳ ಮೀಸಲಾತಿ ಕಲ್ಪಿಸಲಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ಆಯೋಗದ ವರದಿಯಂತೆ ನಾವು ನಡೆದುಕೊಳ್ಳುವ ಜೊತೆಗೆ, ಯಾರಿಗೂ ನೋವು, ಅನ್ಯಾಯ ಆಗದಂತೆ ತೀರ್ಮಾನಿಸಿ ಕ್ರಮ ಕೈಗೊಂಡಿದ್ದೇವೆ’ ಎಂದರು.
‘2023ರ ಚುನಾವಣೆಯಲ್ಲಿ ಸಮಾಜಕ್ಕೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅವರು ನಡೆದುಕೊಂಡು ಒಳ ಮೀಸಲಾತಿ ಕಲ್ಪಿಸಿ, ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಒಳ ಮೀಸಲಾತಿಗಾಗಿ ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ ನಮ್ಮ ಕೂಗಿಗೆ ಯಾರೂ ಸ್ಪಂದಿಸಿರಲಿಲ್ಲ. ಶೋಷಿತರು, ದಲಿತರ ಪರವಾಗಿ ಸದಾ ಚಿಂತಿಸುವ ಸಿದ್ದರಾಮಯ್ಯ ಅವರಿಂದಾಗಿ ಒಳಮೀಸಲಾತಿ ದೊರೆತಿದೆ’ ಎಂದು ತಿಮ್ಮಯ್ಯ ಹೇಳಿದರು.
ಡಿಸಿಸಿ ವಕ್ತಾರ ಹುಣಸೂರು ಬಸವಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಮುಖಂಡರಾದ ಸುನಂದ್ ಕುಮಾರ್, ಎಸ್. ನಾರಾಯಣ್, ಆದಿಜಾಂಬವ ಸಮಿತಿಯ ಅಧ್ಯಕ್ಷ ಎಡತೊರೆ ನಿಂಗರಾಜು, ಎಂ.ಶಿವಮೂರ್ತಿ ಪಾಲ್ಗೊಂಡಿದ್ದರು.
ನಂತರ ಸಿದ್ದರಾಮಯ್ಯ ಅವರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ವೀಕ್ಷಿಸಿದರು. ಸಚಿವರಾದ ಕೆ.ವೆಂಕಟೇಶ್, ಜಮೀರ್ ಅಹಮದ್ ಖಾನ್, ಬಿ.ಸುರೇಶ್, ಶಾಸಕ ತನ್ವೀರ್ ಸೇಠ್, ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.