ಮೈಸೂರು: ಜಿಲ್ಲೆಯಲ್ಲಿ 2025ನೇ ಸಾಲಿನಲ್ಲಿ ಅ.31ರವರೆಗೆ 94 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಏಳು ಮಂದಿ ರೈತ ಮಹಿಳೆಯರು ಸೇರಿದ್ದಾರೆ.
ಕೃಷಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಕಳವಳಕ್ಕೆ ಕಾರಣವಾಗಿದೆ. 2023ರಿಂದ ಇದೇ ವರ್ಷದ ಅ.31ರವರೆಗೆ ಒಟ್ಟು 256 ರೈತರು ಸಾವಿನ ಮನೆಯ ಕದ ತಟ್ಟಿದ್ದಾರೆ. ಇದರಿಂದಾಗಿ ಅವರ ಕುಟುಂಬಗಳು ಅತಂತ್ರವಾಗಿವೆ. ಆಧಾರಸ್ತಂಭವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರದ ಸಹಾಯಕ್ಕಾಗಿ ಕೈಚಾಚುವ ಸ್ಥಿತಿ ಆ ಕುಟುಂಬಗಳಿಗೆ ಎದುರಾಗಿದೆ.
ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಡಳಿತದಿಂದ ಅಂಕಿ–ಅಂಶ ಒದಗಿಸಲಾಗಿದೆ. ಅದರಂತೆ, 2023ರಿಂದ ಈವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಪೈಕಿ 15 ಮಂದಿ ರೈತ ಮಹಿಳೆಯರು ಸೇರಿರುವ ಮಾಹಿತಿಯನ್ನು ನೀಡಲಾಗಿದೆ. 241 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೆಚ್ಚುತ್ತಿದೆ: ರೈತ ಮಹಿಳೆಯರ ಆತ್ಮಹತ್ಯೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. 2023ರಲ್ಲಿ ಮೂವರು, 2024ರಲ್ಲಿ ಐವರು ಹಾಗೂ 2025ರಲ್ಲಿ ಅ.31ರವರೆಗೆ 7 ಮಂದಿ ರೈತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ.
212 ಪ್ರಕರಣಗಳಲ್ಲಷ್ಟೆ ಅಂತಿಮ ವರದಿ: ಈ 256 ಪ್ರಕರಣಗಳಲ್ಲಿ ಈವರೆಗೆ 212 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಕೆಯಾಗಿದೆ. 44 ಪ್ರಕರಣಗಳಲ್ಲಿ ತನಿಖೆ ಪ್ರಗತಿಯಲ್ಲಿದೆ. ಬ್ಯಾಂಕ್‌ಗಳಲ್ಲಿ ಪಡೆದ ತೀರಿಸಲಾಗದೆ, ಮಾನಕ್ಕೆ ಅಂಜಿ 190 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, 66 ರೈತರು ಇತರ ಕಾರಣಗಳಿಂದಾಗಿ ಸಾವಿನ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಜಿಲ್ಲೆಯಲ್ಲಿ 2022–23ನೇ ಸಾಲಿನಲ್ಲಿ 75 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ವರದಿ ಆಗಿತ್ತು. ಕೃಷಿ ಸೇರಿದಂತೆ ವಿವಿಧ ಇಲಾಖೆಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿರುವುದು, ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಹಾಗೂ ಪ್ರೋತ್ಸಾಹಕರ ಉಪಕ್ರಮಗಳ ನಡುವೆಯೂ ಬೇಸಾಯಗಾರರ ಆತ್ಮಹತ್ಯೆ ಪ್ರಕರಣಗಳು ನಿಲ್ಲದಿರುವುದು ಅಂಕಿ–ಅಂಶಗಳಿಂದ ದೃಢಪಟ್ಟಿದೆ.
ವರದಿಯಾಗದವೂ ಇವೆ: ‘ಕೃಷಿ ಇಲಾಖೆ ವರದಿಯಾಗಿರುವ ಪ್ರಕರಣಗಳ ಕುರಿತಷ್ಟೇ ಸರ್ಕಾರಕ್ಕೆ ಮಾಹಿತಿ ಸಲ್ಲಿಸುತ್ತದೆ. ಆದರೆ, ‘ವರದಿ ಆಗದಿರುವ’ ಪ್ರಕರಣಗಳೂ ಇವೆ’ ಎನ್ನುತ್ತಾರೆ ರೈತ ಹೋರಾಟಗಾರರು.
‘ರೈತರ ಆತ್ಮಹತ್ಯೆ ತಡೆಗೆ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಅನುಮೋದನೆಯಾಗುವ ಪ್ರಕರಣದಲ್ಲಿ ಕುಟುಂಬಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುತ್ತಿದೆ. ಮಕ್ಕಳ ಶಾಲಾ ಪ್ರವೇಶ ಶುಲ್ಕ ಭರಿಸುವುದು, ಮನೆ ಇಲ್ಲದವರಿಗೆ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದು, ವಿಧವಾ ವೇತನ ಹಾಗೂ ₹ 5 ಲಕ್ಷ ಪರಿಹಾರ ವಿತರಣೆಯಂಥ ಪರಿಹಾರ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ದೇಶದಲ್ಲಿ ನಿತ್ಯ ಸರಾಸರಿ 36 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರವೇ ಹೇಳಿದೆ. ಇದನ್ನು ತಡೆಯಲು ಕ್ರಮ ವಹಿಸುತ್ತಿಲ್ಲಬಡಗಲಪುರ ನಾಗೇಂದ್ರ ಅಧ್ಯಕ್ಷ ರಾಜ್ಯ ರೈತ ಸಂಘ
ರೈತ ಮುಖಂಡರು ಹೇಳುವ ‘ಕಾರಣಗಳು’
‘ರೈತರ ಬೆಳೆಗಳಿಗೆ ಯಾವ ವರ್ಷವೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಅವರಿಗೆ ಆರ್ಥಿಕವಾಗಿ ಬೇರೆ ಮೂಲಗಳಿಲ್ಲ. ಬೆಳೆ ವಿಫಲವಾದರೆ ಸಾಲ ಮಾಡಿ ಮತ್ತೊಂದು ಬೆಳೆ ಹಾಕುತ್ತಾರೆ. ಸಾಲದ ಬಾಧೆ ಮೊದಲಾದ ಕಾರಣಗಳಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ’ ಎಂದು ರೈತ ಹೋರಾಟಗಾರ ಅತ್ತಹಳ್ಳಿ ದೇವರಾಜ್ ತಿಳಿಸಿದರು. ಕಾಡಂಚಿನಲ್ಲಿ ಕಾಡುಪ್ರಾಣಿಗಳಿಂದ ಬೆಳೆ ಹಾನಿ ಮೊದಲಾದ ಕಾರಣದಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲದ ಬಾಧೆ ಸಾಲ ವಸೂಲಾತಿ ನೋಟಿಸ್ ಹಾಗೂ ಕಿರುಕುಳ ರೂಪದ ಒತ್ತಡ ಮರ್ಯಾದೆಗೆ ಹೆದರಿ ರೈತರು ಆತ್ಮಹತ್ಯೆ ನಿರ್ಧಾರ ಮಾಡುತ್ತಿದ್ದಾರೆ ಎನ್ನುವುದು ರೈತ ಮುಖಂಡರಿಂದ ಕೇಳಿಬರುತ್ತಿರುವ ಕಾರಣಗಳಾಗಿವೆ. ‘ರೈತರ ನೆರವಿಗೆ ಯೋಜನೆಗಳನ್ನು ರೂಪಿಸಬೇಕು. ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಕೃಷಿ ಪರಿಕರಗಳನ್ನು ಉಚಿತವಾಗಿ ನೀಡಿ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.