ADVERTISEMENT

ಮೈಸೂರು: 8 ಮಂದಿ ದರೋಡೆಕೋರರ ಬಂಧನ

ಸರಸ್ವತಿಪುರಂ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 7:05 IST
Last Updated 17 ಸೆಪ್ಟೆಂಬರ್ 2020, 7:05 IST
ಬಂಧಿತ ಆರೋಪಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ತಂಡ
ಬಂಧಿತ ಆರೋಪಿಗಳೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ತಂಡ   

ಮೈಸೂರು: ಇಲ್ಲಿನ ಸರಸ್ವತಿಪುರಂ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದರೋಡೆಗೆ ಹೊಂಚು ಹಾಕಿದ್ದ 8 ಮಂದಿಯನ್ನು ಬಂಧಿಸಿದ್ದಾರೆ.

ಶರತ್ (25), ಸುಮಂತ್ (24), ಧರ್ಮೇಶ್ (22), ದಿನೇಶ್ (26), ಕಾರ್ತೀಕ್ (25), ಮಹದೇವ (24), ಸುನಿಲ್‌ಕುಮಾರ್ (23), ಶಶಾಂಕ್ (22) ಬಂಧಿತರು ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೋಗಾದಿ ರಿಂಗ್‌ರಸ್ತೆಯಲ್ಲಿ ಓಮ್ನಿ ವಾಹನದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇವರು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದುದು ಗೊತ್ತಾಯಿತು ಎಂದರು.

ADVERTISEMENT

‘ಹಂತ ಹಂತವಾಗಿ ವಿಚಾರಣೆ ನಡೆಸಿದಾಗ ಇವರು ಸರಸ್ವತಿಪುರಂ, ವಿದ್ಯಾರಣ್ಯಾಪುರಂ ಹಾಗೂ ಲಕ್ಷ್ಮೀಪುರಂ ಠಾಣೆಗಳಲ್ಲಿ ದರೋಡೆ ಮತ್ತು ವಿಜಯನಗರ, ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪತ್ತೆಯಾಯಿತು’ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.

ಮತ್ತಷ್ಟು ಜನರು ತಂಡದಲ್ಲಿ?

ಇವರೊಂದಿಗೆ ಇನ್ನಷ್ಟು ಮಂದಿ ತಂಡದಲ್ಲಿದ್ದು ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂಬ ಅಂಶ ತನಿಖೆಯ ವೇಳೆ ಗೊತ್ತಾಗಿದೆ. ಇವರಿಗಾಗಿ ಬಿರುಸಿನ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತರ ವಿಚಾರಣೆಯು ಡಿಸಿಪಿಗಳಾದ ಪ್ರಕಾಶ್‌ಗೌಡ, ಗೀತಾಪ್ರಸನ್ನ, ಎಸಿಪಿ ಪೂರ್ಣಚಂದ್ರತೇಜಸ್ವಿ ಅವರ ಉಸ್ತುವಾರಿಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಜೆ.ಸಿ.ರಾಜು, ಆರ್.ವಿಜಯಕುಮಾರ್, ಪಿಎಸ್‌ಐ ಭವ್ಯಾ, ಸಿಬ್ಬಂದಿಯಾದ ಸದಾಶಿವಪ್ಪ, ಅಶೋಕ್, ಕರುಣಾಕರ, ಬಸವರಾಜೇಅರಸ್, ಪ್ರಕಾಶ್, ರಾಘವೇಂದ್ರ, ಅರ್ಜುನ್, ಹರೀಶ್‌, ನಟರಾಜ ಕಾರ್ಯಾಚರಣೆ ತಂಡದಲ್ಲಿದ್ದರು.

ಸೋಮವಾರವಷ್ಟೇ ‘ಪ್ರಜಾವಾಣಿ’ಯಲ್ಲಿ ‘ಕೊರೊನಾ ಸಂಕಷ್ಟದಲ್ಲಿ ಹೆಚ್ಚಿದ ಕಳ್ಳತನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಕೆಲಸ ನೀಡುವುದಾಗಿ ಹಣ ಪಡೆದು ವಂಚನೆ

ಮೈಸೂರು: ಕೆಲಸ ನೀಡುವುದಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಎಚ್.ಎಸ್.ಗಿರೀಶ್ ಎಂಬುವವರು ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಐಕೋನಿವೋ ಟೈರಾಂಟೋ ಕಂಪನಿಯ ಪ್ರತಿನಿಧಿಗಳು ಕೆಲಸ ನೀಡುವುದಾಗಿ ನಂಬಿಸಿ ತಲಾ ₹ 38 ಸಾವಿರ ಹಣವನ್ನು 10 ಮಂದಿಯಿಂದ ಪಡೆದು ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.