ADVERTISEMENT

ದರೋಡೆ: 24 ಗಂಟೆಯಲ್ಲಿ ಪತ್ತೆ, ಬಂಧನ

ರಾಜ್ಯ ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಬೆದರಿಕೆ ಹಾಕಿ ಇಬ್ಬರಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 1:52 IST
Last Updated 8 ಅಕ್ಟೋಬರ್ 2020, 1:52 IST
ರಾಜ್ಯ ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ ಪೊಲೀಸರು. ಡಿವೈಎಸ್‌ಪಿ ಡಾ.ಎ.ಆರ್.ಸುಮಿತ್, ಸಿಪಿಐ ಪಿ.ಕೆ.ರಾಜು, ಎಸ್ಐ ವಿ.ಚೇತನ್ ಇದ್ದಾರೆ
ರಾಜ್ಯ ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ ಪೊಲೀಸರು. ಡಿವೈಎಸ್‌ಪಿ ಡಾ.ಎ.ಆರ್.ಸುಮಿತ್, ಸಿಪಿಐ ಪಿ.ಕೆ.ರಾಜು, ಎಸ್ಐ ವಿ.ಚೇತನ್ ಇದ್ದಾರೆ   

ಕೆ.ಆರ್.ನಗರ: ಲಾರಿ ಚಾಲಕನಿಗೆ ಚಾಕು ತೋರಿಸಿ ಮಂಗಳವಾರ ಬೆಳಗಿನ ಜಾವ ರಾಜ್ಯ ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 24ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಕೆ.ಆರ್.ನಗರದ ಮೀನಾಕ್ಷಿ ಬ್ಲಾಕ್ ನಿವಾಸಿ ಆಟೊ ಚಾಲಕ ಶರತ್ (25) ಮತ್ತು ಹುಣಸೂರು ತಾಲ್ಲೂಕು ಬೋಳನಹಳ್ಳಿ ಗ್ರಾಮದ ನಿವಾಸಿ, ಗಾರೆ ಕೆಲಸಗಾರ ವಾಸು (23) ಬಂಧಿತ ಆರೋಪಿಗಳು.

ಹತ್ತಿ ತುಂಬಿದ್ದ ಲಾರಿಯೊಂದು ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿತ್ತು. ತಾಲ್ಲೂಕಿನ ದೊಡ್ಡೇಕೊಪ್ಪಲು ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ಲಾರಿ ಕೆಟ್ಟು ನಿಂತಿತ್ತು.

ADVERTISEMENT

ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಆರೋಪಿಗಳು ಚಾಲಕನಿಗೆ ಚಾಕು ತೋರಿಸಿ ಚಾಲಕನ ಬಳಿ ಇದ್ದ ₹ 30 ಸಾವಿರ ನಗದು ಮತ್ತು ₹ 19 ಸಾವಿರ ಮೌಲ್ಯದ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ₹ 10 ಸಾವಿರ ನಗದು ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐ ಪಿ.ಕೆ.ರಾಜು ಪ್ರಜಾವಾಣಿಗೆ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಪಿ.ಕೆ.ರಾಜು, ಎಸ್ಐ ವಿ.ಚೇತನ್, ಸಿಬ್ಬಂದಿ ಹಿದಾಯತ್, ಜವರೇಶ್, ಧನಂಜಯ, ನಾರಾಯಣ ಶೆಟ್ಟಿ, ಮಲ್ಲೇಶ, ಪ್ರದೀಪ, ಪುನೀತ್, ಗಣೇಶ, ಯಶವಂತ್, ಪಾರ್ಥ ಮತ್ತು ವಾಹನ ಚಾಲಕರಾದ ಇಮ್ದಾದ್ ಆಲಿ, ಅನಿತ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.