ADVERTISEMENT

ಮೈಸೂರು: ಸಹಸ್ರ ಚಂದ್ರ ದರ್ಶನ ಶಾಂತಿ ಹೋಮ ಫೆ.1ರಿಂದ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 13:52 IST
Last Updated 31 ಜನವರಿ 2023, 13:52 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮೈಸೂರು: ಇಲ್ಲಿನ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80ನೇ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಫೆ.1ರಿಂದ 5ರವರೆಗೆ ಸಹಸ್ರ ಚಂದ್ರ ದರ್ಶನ ಶಾಂತಿ ಹೋಮವನ್ನು ಆಯೋಜಿಸಲಾಗಿದೆ.

‘108 ಹೋಮ ಕುಂಡದಲ್ಲಿ ಎಲ್ಲಾ ದೇವತೆಗಳಿಗೆ ಹೋಮ ನಡೆಸಲಾಗುತ್ತಿದೆ. ನಾಡಿನಲ್ಲಿ ಒಳ್ಳೆಯ ಮಳೆ, ಬೆಳೆ ಆಗಬೇಕು. ಅಕಾಲಿಕ ಮಳೆಯಾಗುವುದು ತಪ್ಪಿ ದೇಶ ಸುಭಿಕ್ಷವಾಗಬೇಕು ಎಂದು ಪ್ರಾರ್ಥಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಪಾಲ್ಗೊಳ್ಳಬೇಕು’ ಎಂದು ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

ಫೆ.1ರಂದು ಭೀಷ್ಮ ಏಕಾದಶಿ ಇದ್ದು ಬೆಳಿಗ್ಗೆ 8ಕ್ಕೆ ಆಶ್ರಮದ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. 9ಕ್ಕೆ ನರಸಿಂಹ ಕಲ್ಯಾಣ, 10ಕ್ಕೆ ಸ್ವಾಮೀಜಿ ಅವರನ್ನು ಶ್ರೀದತ್ತ ವೆಂಕಟೇಶ್ವರ ದೇವಸ್ಥಾನದಿಂದ ನಾದಮಂಟಪಕ್ಕೆ ರಥದಲ್ಲಿ ಕರೆತರುವ ಕಾರ್ಯಕ್ರಮವಿದೆ. 11ಕ್ಕೆ ದಾನ ಸಂಕಲ್ಪ– ಮೂರು ಬಾರಿ ಕೂಷ್ಮಾಂಡ ಹೋಮ ನಡೆಯಲಿದೆ. ಸಂಜೆ ಪವಮಾನ ಹೋಮ ಹಮ್ಮಿಕೊಳ್ಳಲಾಗಿದೆ.

ADVERTISEMENT

ಫೆ.2ರಂದು ದ್ವಾದಶಿ. ಬೆಳಿಗ್ಗೆ 7ಕ್ಕೆ ಪವಮಾನ ಹೋಮ, 10ಕ್ಕೆ ಸಕಲ ದೇವತಾ ಹೋಮ, 12ಕ್ಕೆ ಸಚ್ಚಿದಾನಂದೇಶ್ವರ ಸ್ವಾಮಿಗೆ ಏಕಾವರ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 3ಕ್ಕೆ ರುದ್ರ ಹೋಮ, ಸಂಜೆ 7ಕ್ಕೆ ರುದ್ರ ಹೋಮ ಪೂರ್ಣಾವತಿ ನಡೆಯಲಿದೆ. 3ರಂದು ತ್ರಯೋದಶಿ ಅಂಗವಾಗಿ ಬೆಳಿಗ್ಗೆ 7ಕ್ಕೆ ಆಯುಷ್ಕಾಮೇಸ್ಟಿ ನಡೆಯಲಿದೆ. 9ಕ್ಕೆ ಅಷ್ಟದ್ರವ್ಯ ಸಹಿತ ಸಹಸ್ರ ಮೋದಕ ಗಣಪತಿ ಹೋಮ, ಸಂಜೆ 4ಕ್ಕೆ ನಾರಾಯಣ ಹೋಮ, ಸಂಜೆ 7ಕ್ಕೆ ಪೂರ್ಣಾವತಿ ಇರಲಿದೆ.

ಫೆ.4ರಂದು ಚತುರ್ದಶಿ ಅಂಗವಾಗಿ ಬೆಳಿಗ್ಗೆ 7ಕ್ಕೆ ಪ್ರಧಾನ ಯಾಗ - ಆಶಿಷ್ಯ ಹೋಮ ಮತ್ತು ಲಕ್ಷ್ಮೀನಾರಾಯಣ ಹೋಮ ನಡೆಯಲಿದೆ. 10ಕ್ಕೆ ಪೂರ್ಣಾಹುತಿ, 11ಕ್ಕೆ ಮಹಾಭಿಷೇಕ ನಡೆಯಲಿದೆ. ಸಂಜೆ 4ಕ್ಕೆ ಪುಣ್ಯ ವಾಚನ, ಸಂಜೆ 6ಕ್ಕೆ ಗುರುಪೂಜೆ ಹಾಗೂ ಸ್ವಾಮೀಜಿಯಿಂದ ವಿಶೇಷ ಸಂದೇಶ ಕಾರ್ಯಕ್ರಮವಿದೆ. ರಾತ್ರಿ 8ಕ್ಕೆ ಪೂರ್ಣಚಂದ್ರನ ದರ್ಶನ. ಫೆ.5ರಂದು ಮಾಗ ಪೂರ್ಣಿಮೆ ಅಂಗವಾಗಿ ಬೆಳಿಗ್ಗೆ 7ಕ್ಕೆ ಪವಮಾನ ಹೋಮ, ದತ್ತ ಹೋಮ, ಕಾರ್ಯ ಸಿದ್ದಿ ಹನುಮಂತನಿಗೆ ವಿಶೇಷ ಅರ್ಚನೆ ನೆರವೇರಲಿದೆ. ಸಂಜೆ 6ಕ್ಕೆ ತೆಪ್ಪೋತ್ಸವ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.