ಸಾಲಿಗ್ರಾಮ: ಹೊರವಲಯದ ಚಾಮರಾಜ ಎಡದಂಡೆ ನಾಲೆಯಲ್ಲಿ ಸೋಮವಾರ ಮಧ್ಯಾಹ್ನ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನ ರಭಸಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ.
ಪಟ್ಟಣದ ಗ್ರಾಮ ಪಂಚಾಯಿತಿ ಸದಸ್ಯ ಶಕೀಲ್ ಅವರ ಮಕ್ಕಳಾದ ಅಯಾನ್ (15), ರಿಯಾನ್ (12) ಹಾಗೂ ಮುಬಾರಕ್ ಅವರ ಮಗ ಲುಕ್ಮಾನ್ (14) ಮೃತರು. ಈ ಮೂವರು ಸ್ನೇಹಿತರಾಗಿದ್ದು, ಅಯಾನ್ ಹಾಗೂ ರಿಯಾನ್ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮೊರಾರ್ಜಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ರಜೆ ಇದ್ದುದರಿಂದ ಸಾಲಿಗ್ರಾಮಕ್ಕೆ ಬಂದಿದ್ದರು. ಲುಕ್ಮಾನ್ ಸಾಲಿಗ್ರಾಮ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದ.
ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಈಜಲು ಹೋದಾಗ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದಾರೆ. ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡುಕಾಟ ನಡೆಸಿದಾಗ ನಾಲೆ ಬಳಿ ಹೋಗಿರುವುದು ಗೊತ್ತಾಗಿದೆ. ತಕ್ಷಣ ನಾಲೆಗೆ ನೀರು ಹರಿಯುವುದನ್ನು ನಿಲ್ಲಿಸಿದ ಮೆರೆಗೆ ಅಯಾನ್, ಲುಕ್ಮಾನ್ ಶವ ಸಿಕ್ಕಿದ್ದು, ರಿಯಾನ್ ಶವಕ್ಕಾಗಿ ಅಗ್ನಿಶಾಮಕದಳದವರು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೃತ ದೇಹಗಳನ್ನು ಕೆ.ಆರ್.ನಗರ ತಾಲ್ಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗಿದೆ. ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.