ADVERTISEMENT

ಮೈಸೂರು | ಚಾಮುಂಡಿಬೆಟ್ಟದಲ್ಲಿ 32ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 9:13 IST
Last Updated 7 ಸೆಪ್ಟೆಂಬರ್ 2023, 9:13 IST
   

ಮೈಸೂರು: 'ಮೈಸೂರು ಭಾಗದ ಕುಗ್ರಾಮಗಳಲ್ಲಿ ಹಿಂದುಳಿದ‌, ಬಡವರ ಮಕ್ಕಳಿಗಾಗಿ ಉಚಿತ ವಿದ್ಯಾರ್ಥಿ ನಿಲಯ ಮತ್ತು ಶಾಲೆಗಳನ್ನು ಸ್ಥಾಪಿಸಿದ ಟಿ.ಎಸ್.ಸುಬ್ಬಣ್ಣ ಎಂದೆಂದೂ ನೆನಪಾಗುವ ಅಪರೂಪದ ಚೇತನ' ಎಂದು ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಬಾಲಕಿಯರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪರಮಶಿವ‌ ನಡುಬೆಟ್ಟ ಅಭಿಪ್ರಾಯಪಟ್ಟರು.

ಚಾಮುಂಡಿಬೆಟ್ಟದಲ್ಲಿರುವ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ 32ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 'ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಎಂಬ ಪರಿಕಲ್ಪನೆಗೆ ಜಾತ್ಯತೀತ ಸ್ವರೂಪವನ್ನು ತಂದುಕೊಟ್ಟ ಅಪರೂಪದ ಸಮಾಜಸೇವಕ ಸುಬ್ಬಣ್ಣ' ಎಂದು ಬಣ್ಣಿಸಿದರು.

'ತಮ್ಮ ಜಾತ್ಯತೀತ ನಡೆ-ನಿಲುವಿನಿಂದ, ಸಂಪ್ರದಾಯಸ್ಥ ಮನೆಯಲ್ಲೂ ವಿರೋಧಗಳನ್ನು ಎದುರಿಸಿದ ಸುಬ್ಬಣ್ಣನವರು, ಸ್ವಾತಂತ್ರ್ಯ ಹೋರಾಟದಲ್ಲೂ ನಿರಂತರ ಪಾಲ್ಗೊಂಡು ಗಾಂಧೀಜಿಯ ಪ್ರಿಯ ಶಿಷ್ಯರಲ್ಲಿ ಒಬ್ಬರಾಗಿದ್ದರು' ಎಂದರು.

ADVERTISEMENT

'ನಂಜನಗೂಡು ತಾಲ್ಲೂಕಿನ ಹುರ, ಕಳಲೆ, ತಾಯೂರು, ತಿ.ನರಸೀಪುರ ತಾಲ್ಲೂಕಿನ ತಲಕಾಡು, ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ, ಯಳಂದೂರು ತಾಲ್ಲೂಕಿನ ಅಗರ, ಮಾಂಬಳ್ಳಿ, ಚಾಮರಾಜನಗರ ತಾಲ್ಲೂಕಿನ ಕಾಗಲವಾಡಿ, ಗುಂಡ್ಲುಪೇಟೆ ತಾಲ್ಲೂಕಿನ ವಡ್ಡಗೆರೆ, ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಸಾರ್ವಜನಿಕ ಶಾಲೆಗಳನ್ನು ಸ್ಥಾಪಿಸಿದರು. ವಿದ್ಯಾರಣ್ಯಪುರಂನಲ್ಲಿ ಬಾಲಕರ ವಸತಿ ಶಾಲೆ, ಚಾಮುಂಡಿಬೆಟ್ಟದಲ್ಲಿ ಬಾಲಕಿಯರ ವಸತಿಶಾಲೆಯನ್ನು ಸ್ಥಾಪಿಸಿದರು. ಇವತ್ತಿಗೂ ಈ ಶಾಲೆ, ವಸತಿಶಾಲೆಗಳು ಬಡ ಕುಟುಂಬಗಳ‌ ಸಾವಿರಾರು ಮಕ್ಕಳ ಬದುಕಿನಲ್ಲಿ ಶಿಕ್ಷಣ ಜ್ಯೋತಿಯನ್ನು ಬೆಳಗುತ್ತಿದೆ' ಎಂದರು.

'ಸಾಮಾಜಿಕ ಪರಿವರ್ತನೆಗಾಗಿ ಒಂದೆಡೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಮತ್ತೊಂದೆಡೆ, ಸ್ವಾತಂತ್ರ್ಯ ಹೋರಾಟದಲ್ಲಿ ನಿರಂತರ ತೊಡಗಿಸಿಕೊಂಡಿದ್ದರು. ಲಾಠಿ ಏಟುಗಳನ್ನು ತಿಂದಿದ್ದರು. ಅನಾಥ ಮಕ್ಕಳಿಗೆ ಆಶ್ರಯ ನೀಡಿ ತಾಯ್ತನದ ಗುಣವನ್ನು ಮೆರೆದಿದ್ದರು' ಎಂದು ಸ್ಮರಿಸಿದರು.

'ಕನ್ನಡದ ಪ್ರಮುಖ ವಿಮರ್ಶಕರಾದ ಯು.ಆರ್.ಅನಂತಮೂರ್ತಿ, ಜಿ.ಎಚ್.ನಾಯಕ ಅವರು ಸುಬ್ಬಣ್ಣನವರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಓದಿದ್ದರು' ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಕೆಂಪಯ್ಯ‌, 'ಪ್ರಜಾವಾಣಿ' ಬ್ಯುರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಮಾತನಾಡಿದರು. ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಟ್ರಸ್ಟಿ ಸುವರ್ಣಾದೇವಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ‌ ಕಲಾವತಿ‌, ಮುಖ್ಯಶಿಕ್ಷಕ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.

ಸಂಗೀತ ಶಿಕ್ಷಕ ಗರುಢಾಚಾರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧೀಜಿಗೆ ಪ್ರಿಯವಾದ ಪ್ರಾರ್ಥನಾ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.