ADVERTISEMENT

‘ಚರಕ’ದೊಂದಿಗೆ ಬೆರೆತ ಶಕ್ತಿಧಾಮ: ಶಿವರಾಜ್‌ಕುಮಾರ್ ಭಾವುಕ

ತಾವೇ ನೂಲಿದ ‘ಖಾದಿ’ ಪಡೆದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 8:05 IST
Last Updated 2 ಅಕ್ಟೋಬರ್ 2023, 8:05 IST
   

ಮೈಸೂರು: ನಗರದ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ ‘ಶಕ್ತಿಧಾಮ’ದ ಮಕ್ಕಳು, ಚರಕದಿಂದ ತೆಗೆದ ನೂಲಿನಿಂದ ತಯಾರಾದ ಖಾದಿ ಬಟ್ಟೆಯನ್ನು ಪಡೆಯುವ ಮೂಲಕ ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.

ನಾಲ್ಕು ತಿಂಗಳಿಂದ ಶಾಲೆಯ 9ನೇ ತರಗತಿಯ 25 ಮಕ್ಕಳು ಚರಕದಿಂದ 650 ‘ಲಡಿ’ (ದಾರದ ಉಂಡೆ) ತೆಗೆದಿದ್ದರು. ಅದರಿಂದ 320 ಮೀಟರ್ ಬಟ್ಟೆಯನ್ನು ಮೇಲುಕೋಟೆಯ ನೇಕಾರರು ತಯಾರಿಸಿದ್ದರು. ಶಕ್ತಿಧಾಮದ ಪೋಷಕ, ನಟ ಶಿವರಾಜ್ ಕುಮಾರ್ ಮಕ್ಕಳು ನೂಲಿದ ‘ಖಾದಿ‌’ಯನ್ನು ಸೋಮವಾರ ಸ್ವೀಕರಿಸಿ ಭಾವುಕರಾದರು.

ನಂತರ ಮಾತನಾಡಿ, ‘ಗಾಂಧಿ ಎಂದರೆ ಚರಕ ನೆನಪಾಗುತ್ತದೆ. ಚರಕ ಕೇವಲ ನೆನಪಾಗಬಾರದು. ಸ್ವಾವಲಂಬನೆಯ ಸಂಕೇತವಾದ ಆ ಪರಂಪರೆಯನ್ನು ನಾವೆಲ್ಲರೂ ಉಳಿಸಬೇಕು. ನಮ್ಮ ಶಾಲೆಯ ಮಕ್ಕಳ ಸಾಧನೆ, ಗಾಂಧಿ ಅರ್ಥೈಸಿಕೊಂಡಿರುವ ಮಾರ್ಗ ಖುಷಿ ನೀಡಿದೆ’ ಎಂದರು.

ADVERTISEMENT

ನಾನೂ ನೂಲುವೆ: ‘ನಾನೂ ಚರಕದಿಂದ ನೂಲು ತೆಗೆಯಲು ನಿತ್ಯ ಒಂದು ಗಂಟೆ ಮೀಸಲಿಡಲು ನಿರ್ಧರಿಸಿದ್ದೇನೆ. ನಟ ಕೆ.ಜೆ.ಸಚ್ಚಿದಾನಂದ ಅವರು ಚರಕದ ಮೂಲಕ ನಮ್ಮ ಮಕ್ಕಳಿಗೆ ಒಳ್ಳೆಯ ದಾರಿ ತೋರಿದ್ದಾರೆ’ ಎಂದು ಅವರು ಪ್ರಶಂಸಿಸಿದರು.

‘ತಂದೆ–ತಾಯಿ ಶಕ್ತಿಧಾಮದ ಮೇಲಿಟ್ಟದ್ದ ಕನಸು, ಬೇರೆ ರೂಪವನ್ನೇ ಈ ಗಾಂಧಿ ಜಯಂತಿಯಂದು ಪಡೆದಿದೆ. ಮಕ್ಕಳಲ್ಲಿದ್ದ ಆತ್ಮವಿಶ್ವಾಸ, ಕೌಶಲವನ್ನು ಪರಿಚಯಿಸಿದೆ. ವ್ಯಕ್ತಿತ್ವ ರೂಪಿಸಿಕೊಳ್ಳುವ, ಸಾಧನೆ ಮಾಡುವ ಶಕ್ತಿ ಹಾಗೂ ಪ್ರೀತಿಯು ನಮ್ಮ ಮಕ್ಕಳಿಗೆ ಎಲ್ಲರಿಂದಲೂ ಬರಲಿ’ ಎಂದು ಕೋರಿದರು.

‘ನೂಲು ತೆಗೆಯುವಾಗ ದಾರ ಕಿತ್ತು ಹೋಗುವುದು ಸಾಮಾನ್ಯ. ಅದು ನಮ್ಮ ತಾಳ್ಮೆ, ಸಂಯಮ ಬೇಡುತ್ತದೆ. ಬೇಸರವಾದಾಗ ಚರಕದಿಂದ ನೂಲು ತೆಗೆಯುತ್ತಿದ್ದರೆ, ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ನಾವೇ ತಯಾರಿಸಿದ ನೂಲು, ಬಟ್ಟೆಯಾಗಿ ಧರಿಸಿದಾಗ ಆಗುವ ತೃಪ್ತಿಯನ್ನು ಹೇಳಲಾಗದು’ ಎಂದರು.

‘ಸಂತ ಕಬೀರ ಪಾತ್ರವನ್ನು ರಾಜ್‌ಕುಮಾರ್‌ ಮಾಡಿದ್ದರು. ನಾನು ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟಿಸಿದ್ದೆ. ನೇಯ್ಗೆಯಿಂದ ಸಂಪಾದನೆಯಾಗುತ್ತದೆ ಎಂಬುದಕ್ಕಿಂತ ನೋವನ್ನು ಕಳೆಯುತ್ತೇವೆ. ನಾವು ತೆಗೆದ ನೂಲು ಮತ್ತೊಬ್ಬರಿಗೆ ಉದ್ಯೋಗ ನೀಡುತ್ತದೆ’ ಎಂದು ಹೇಳಿದರು.

ಜನಪದ ಸೇವಾಟ್ರಸ್ಟ್‌ನ ಸಂತೋಷ್‌ ಕೌಲಗಿ ಮಾತನಾಡಿ, ‘ಶಕ್ತಿಧಾಮದ ಮಕ್ಕಳು ಗಾಂಧಿಯನ್ನು ಚರಕದ ಮೂಲಕ ನೋಡಿದ್ದಾರೆ. ಈ ಮಾದರಿ ಶಾಲೆಯ ಪೋಷಕರಾದ ಶಿವರಾಜ್‌ಕುಮಾರ್‌ ಅಸಲಿ ಖಾದಿ ಉತ್ಪನ್ನಗಳ ರಾಯಭಾರಿಯಾಗಬೇಕು. ರೈತರು, ನೇಕಾರರಿಗೆ ಆಸರೆಯಾಗಬೇಕು’ ಎಂದು ಕೋರಿದರು.

ಪೋಷಕಿ ಗೀತಾ ಶಿವರಾಜ್‌ಕುಮಾರ್, ಪುಣೆಯ ಹಿರಿಯ ನೂಲುಗಾರ ಮಾಧವ ಸಹಸ್ರ ಬುದ್ಧೆ, ‘ತುಲಾ’ ಖಾದಿ‌ಸಂಸ್ಥೆಯ‌ ಸಂಸ್ಥಾಪಕ ಅನಂತ ಶಯನ, ಸೂಫಿ ಗಾಯಕ ಮೀರ್ ಮುಖ್ತಿಯಾರ್ ಆಲಿ, ನಟ ಕೆ.ಜೆ.ಸಚ್ಚಿದಾನಂದ, ಲೇಖಕ ಉದಯ್ ಗಾಂವ್ಕರ್, ಟ್ರಸ್ಟಿಗಳಾದ ಸದಾನಂದ, ಚೇತನ್, ಸೌಮ್ಯಾ, ಶಕ್ತಿಧಾಮದ ನಿರ್ದೇಶಕಿ ಮಂಜುಳಾ, ಮೈಸೂರು ನೂಲುಗಾರರ ಬಳಗದ ಅಭಿಲಾಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.