ADVERTISEMENT

ಶ್ರೀಗಂಧ ಕಳವು: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 6:40 IST
Last Updated 29 ಸೆಪ್ಟೆಂಬರ್ 2020, 6:40 IST

ನಂಜನಗೂಡು: ತಾಲ್ಲೂಕಿನ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯ ಬಳ್ಳೂರುಹುಂಡಿ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಡಿದಿದ್ದ ನಾಲ್ವರನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳಿಂದ ಮೂರು ಶ್ರೀಗಂಧದ ತುಂಡುಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸರಗೂರು ತಾಲ್ಲೂಕಿನ ಬಾವಿಕೆರೆ ಕಾಲೊನಿಯ ಸುರೇಶ್ (24) ಹಾಗೂ ಕುಮಾರ (27) ಹಾಗೂ ದಡದಹಳ್ಳಿ ಕಾಲೊನಿಯ ರಾಮು (21) ಮತ್ತು ನಡಾಡಿ ಕಾಲೊನಿಯ ಕುಮಾರ (22) ಬಂಧಿತ ಆರೋಪಿಗಳು.

ಪ್ರಕರಣ ವಿವರ: ಬಂಡೀಪುರ ಹುಲಿ ಯೋಜನೆ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಬಳ್ಳೂರುಹುಂಡಿ ಅರಣ್ಯ ಪ್ರದೇಶದಲ್ಲಿ ಸೆ. 26ರ ಮಧ್ಯರಾತ್ರಿ ಅರಣ್ಯ ಪ್ರವೇಶಿಸಿ ಮರಗಳನ್ನು ಕಡಿಯುತ್ತಿದ್ದ ವೇಳೆ ಕೊರಕಲಾಡಿ ಶಿಬಿರದಲ್ಲಿ ವಾಸ್ತವ್ಯ ಹೂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಶಬ್ದ ಕೇಳಿ ಪರಿಶೀಲನೆ ನಡೆಸಿದಾಗ. ಶ್ರೀಗಂಧದ ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದಿತ್ತು. ಆರೋಪಿಗಳ ಪತ್ತೆಗೆ ಶೋಧ ನಡೆಸಿದ ಸಂದರ್ಭ ಹೆಡಿಯಾಲದ ಕುದುರೆ ಗುಂಡಿ ಡ್ಯಾಂ ಸಮೀಪ ಮೂರು ದ್ವಿಚಕ್ರ ವಾಹನಗಳು ಜಮೀನಿನಲ್ಲಿ ನಿಂತಿರುವುದು ಕಂಡುಬಂದಿದೆ. ಅರಣ್ಯ ಸಿಬ್ಬಂದಿ ಮೂರೂ ವಾಹನಗಳನ್ನು ವಶಕ್ಕೆ ಪಡೆದಿದ್ದರು. ನಂತರ ಸೆ. 27ರ ಬೆಳಗ್ಗೆ ವಾಹನಗಳನ್ನು ವಶಪಡಿಸಿಕೊಂಡಿದ್ದ ಸ್ಥಳಕ್ಕೆ ಬಂದ ಕೆಲವರು ನಾವುಗಳು ರಾತ್ರಿ ಜೇನು ಕೀಳಲೆಂದು ಬಂದಿದ್ದು, ರಾತ್ರಿ ಸಮಯವಾದ್ದರಿಂದ ಜಮೀನಿನಲ್ಲಿ ಬೈಕ್‌ಗಳನ್ನು ನಿಲ್ಲಿಸಿದ್ದೆವು. ನಮ್ಮ ವಾಹನಗಳನ್ನು ವಾಪಸ್ ಕೊಡಿ ಎಂದು ಕೇಳಿದ್ದಾರೆ. ಪ್ರತ್ಯೇಕವಾಗಿ ನಾಲ್ಕೂ ಜನರನ್ನು ವಿಚಾರಣೆಗೊಳಪಡಿಸಿದ ನಂತರ. ಶ್ರೀಗಂಧದ ಮರ ಕಡಿದಿದ್ದರಲ್ಲಿ ಭಾಗಿಯಾಗಿರುವುದು ಧೃಡಪಟ್ಟಿದೆ.

ADVERTISEMENT

ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.