
ಸರಗೂರು: ಪಟ್ಟಣದ ಅಂಚೆ ಕಚೇರಿಯಲ್ಲಿ ಠೇವಣಿ ಇಟ್ಟಿದ್ದ ಖಾತೆದಾರರ ಸಹಿ ನಕಲು ಮಾಡಿ, ಮೂರು ಕೋಟಿಗೂ ಹೆಚ್ಚು ಹಣವನ್ನು ಅಂಚೆ ಸಹಾಯಕ, ಅಂಚೆ ಮಾಸ್ಟರ್ ದೀಪಕ್ ಎಂಬ ವ್ಯಕ್ತಿ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಖಾತೆದಾರರು ಸರಗೂರು ಅಂಚೆ ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಹಣ ಕಳೆದು ಕೊಂಡವರ ಖಾತೆದಾರರಿಗೆ ಆರು ತಿಂಗಳುಗಳಿಂದ ಹಣ ಹಿಂತಿರುಗಿಸಿಲ್ಲ. ಅಂಚೆ ಇಲಾಖೆ ಕಾಲ ದೂಡುತ್ತಿದೆ. ಕೂಡಲೇ ಖಾತೆದಾರರಿಗೆ ಅವರ ಠೇವಣಿ ಹಣವನ್ನು ಬಡ್ಡಿ ಸಮೇತ ಕೊಡಿಸಬೇಕು. ಸಹಿ ನಕಲು ಮಾಡಿ ಕೋಟ್ಯಂತರ ರೂಪಾಯಿ ದೋಚಿರುವ ವ್ಯಕ್ತಿಗಳ ಜತೆಗೆ ಅಂಚೆ ಇಲಾಖೆಯ ಉನ್ನತ ಅಧಿಕಾರಿಗಳೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಠೇವಣಿದಾರರು ವಯೋವೃದ್ಧರು, ನಿವೃತ್ತ ನೌಕರರು, ಮಹಿಳೆಯರು ಹೆಚ್ಚಾಗಿದ್ದು ಅವರ ಜೀವನದ ನಿರ್ವಹಣೆ ಕಷ್ಟಕರವಾಗಿದೆ. ಠೇವಣಿದಾರರ ಆರೋಗ್ಯ ಹದಗೆಟ್ಟಿದೆ. ಅವರ ಜೀವಕ್ಕೆ ತೊಂದರೆ ಯಾದರೆ ಅಂಚೆ ಇಲಾಖೆ ಅಧಿಕಾರಿಗಳೆ ನೇರಹೊಣೆ ಎಂದು ಆರ್ಯ ಈಡಿಗ ಸಮಾಜದ ತಾಲ್ಲೂಕು ಅದ್ಯಕ್ಷ ಎಸ್.ಎನ್.ನಾಗರಾಜು, ಆದಿ ಕರ್ನಾಟಕ ಮಹಾಸಭಾ ಮಾಜಿ ಅಧ್ಯಕ್ಷ ಶಿವಣ್ಣ, ಮಲ್ಲೇಶ್, ಎಸ್.ಆರ್. ಮಹೇಶ್ ಎಚ್ಚರಿಕೆ ನೀಡಿದರು.
ಇಷ್ಟು ದೊಡ್ಡ ಹಗರಣ ಆಗಿದ್ದರೂ ಇಲಾಖೆ ಕಣ್ಣು ಮುಚ್ಚಿ ಕುಳಿತ್ತಿದೆ. ಅಂಚೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹಣ ಕಳೆದು ಕೊಂಡಿರುವವರ ಖಾತೆಗೆ ಹಣ ಹಾಕಬೇಕು. ಸಹಿ ನಕಲು ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಚೆ ಇಲಾಖೆಯ ಗ್ರಾಹಕರಿಗೆ ನ್ಯಾಯ ಒದಗಿಸದಿದ್ದರೆ ಕಚೇರಿಗೆ ಬೀಗ ಹಾಕಿ ಅಹೋರಾತ್ರಿ ಧರಣಿ ಮಾಡಿ, ಸರಗೂರು ಬಂದ್ ಮಾಡಲಾಗುವುದು. ಅಲ್ಲದೆ, ಪಟ್ಟಣದ ದೂರವಾಣಿ ಕೇಂದ್ರದ ಎದುರು, ಅಂಚೆ ಇಲಾಖೆಯ ನಿವೇಶನದಲ್ಲಿ ವ್ಯಾಪರ ಮಾಡಲು ಪೆಟ್ಟಿಗೆ ಅಂಗಡಿಗಳನ್ನು ಇಟ್ಟಿಕೊಳ್ಳುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಜಿಲ್ಲಾ ಅಂಚೆ ಇಲಾಖೆಯ ಎಎಸ್‌ಡಿ ಶ್ರೀನಿವಾಸ್ ಮತ್ತು ಚೇತನ್ ಪ್ರತಿಭಟನ ಸ್ಥಳಕ್ಕೆ ಆಗಮಿಸಿ ನೊಂದ ಗ್ರಾಹಕರ ಜೊತೆ ಮಾತನಾಡಿ, ಇಲ್ಲಿ ಆಗಿರುವ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ. ಸಿಬಿಐ ತನಿಖೆ ನಡೆಸಲಿದೆ ಎಂದರು.
‘ಜಿಲ್ಲಾ ಅಂಚೆ ಕಚೇರಿಯ ಜಿಲ್ಲಾ ಅಧೀಕ್ಷಕ ಹರೀಶ್ ಪ್ರತಿಭಟನ ಸ್ಥಳಕ್ಕೆ ಬರಬೇಕಾಗಿತ್ತು. ಆದರೆ, ಅವರು ಕೋಲಾರಕ್ಕೆ ಕೆಲಸದ ಮೇಲೆ ಹೋಗಿದ್ದು, ಬರಲು ಸಾಧ್ಯವಾಗಿಲ್ಲ. ಹಣ ದುರುಪಯೋಗ ಆಗಿರುವ ಹಿನ್ನೆಲೆಯಲ್ಲಿ ಸಹಾಯಕ ಪೋಸ್ಟ್ ಮಾಸ್ಟರ್ ಬಿ.ಎಸ್.ದೀಪಕ್, ಪೋಸ್ಟ್‌ಮ್ಯಾನ್ ಕಾರಯ್ಯ, ಶಶಿಕಲಾ, ತೇಜಾ, ಕೆ.ಎಲ್. ಪುಷ್ಪಾಲತಾ, ಎನ್.ವೀಣಾ, ಚೈತ್ರಾ ಅವರನ್ನು ಅಮಾನತು ಮಾಡಲಾಗಿದೆ. ಇಲ್ಲಿ 75 ಮಂದಿಗೆ ದ್ರೋಹ ಆಗಿದೆ. ಅದರಲ್ಲಿ ನಾಲ್ಕು ಮಂದಿಗೆ ಹಣ ನೀಡಲಾಗಿದೆ. ಬುಧವಾರ ಬೆಂಗೂರಿನಲ್ಲಿ ರಾಜ್ಯ ಸರ್ಕಲ್ ಮಟ್ಟದಲ್ಲಿ ಈ ವಿಷಯದ ಬಗ್ಗೆ ಸಭೆ ನಡೆಯಲಿದೆ. ಸರಗೂರು ಅಂಚೆ ಕಚೇರಿಗೆ ಇಲಾಖೆ ಜಿಲ್ಲಾ ಅಧೀಕ್ಷಕರನ್ನು ಗುರುವಾರ ಕರೆದುಕೊಂಡು ಬಂದು ಅಲ್ಲಿ ನಡೆದ ವಿಷಯವನ್ನು ನಿಮಗೆ ತಿಳಿಸುತ್ತೇನೆ’ ಎಂದರು.
‘ಅಂಚೆ ಕಚೇರಿಯಲ್ಲಿ ಠೇವಣಿ ಇಟ್ಟಿರುವ ದಾಖಲೆಗಳನ್ನು ಅಂಚೆ ಅಧಿಕಾರಿಗಳಿಗೆ ನೀಡಿದ್ದೇವೆ. ಆದರೂ ಇನ್ನು ನಮಗೆ ನ್ಯಾಯ ಸಿಕ್ಕಿಲ್ಲ. ಈ ಸಂಬಂಧ ಜಿಲ್ಲಾ ಅಂಚೆ ಇಲಾಖೆ ಕಚೇರಿ ಅಧೀಕ್ಷಕರಿಗೆ ಮತ್ತು ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗಿ ಮಾಹಿತಿಯನ್ನು ವಿವರವಾಗಿ ತಿಳಿಸಿದ್ದೇವೆ’ ಎಂದು ಪ್ರತಿಭಟನಕಾರರಿಗೆ ತಿಳಿಸಿದರು
ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್, ಪ್ರತಿಭಟನೆಯಲ್ಲಿ ಖಾತೆದಾರರಾದ ವರ್ತಕ ಮಂಡಳಿ ಅಧ್ಯಕ್ಷ ಎಸ್.ಪಿ.ಪ್ರಸಾದ್, ಕಾರ್ಯದರ್ಶಿ ವೆಂಕಟೇಶ್, ಮುಳ್ಳೂರು ಲೋಕೇಶ್, ಎಸ್.ಆರ್ ಮಹೇಶ್, ಎಸ್.ಎನ್.ಮೋಹನ್ ಕುಮಾರ್, ನಿವೃತ್ತ ಶಿಕ್ಷಕ ಶಾಂಭವಮೂರ್ತಿ, ಮಹದೇವಪ್ಪ, ದಾಸೇಗೌಡ, ಎಸ್.ಆರ್.ಮಹೇಶ್ ಕುಮಾರ್, ಸರಗೂರು ಲೋಕೇಶ್, ಸುಂದರಮ್ಮ, ರಾಜೇಶ್, ಸಿ. ನಾಗರಾಜ್, ಸಿ. ಚೌಡಶೆಟ್ಟಿ, ಕರಿಯಪ್ಪ, ವೆಂಕಟೇಶ್, ಅನಂತ ಶಯನ, ಸುಧಾ, ಜಯಮ್ಮ, ಸರೋಜಮ್ಮ, ಜಿ.ಬಿ.ಶಶಿಕಲಾ, ಜಗದೀಶ್ ಸೇರಿದಂತೆ ಹಣ ಕಳೆದು ಕೊಂಡ ಗ್ರಾಹಕರು ಭಾಗವಹಿಸಿದ್ದರು.
ಸ್ಥಳದಲ್ಲಿ ಸಿಪಿಐ ಪ್ರಸನ್ನ ಕುಮಾರ್, ಪಿಎಸ್ಐ ಗೋಪಾಲ್, ಸಿಬ್ಬಂದಿ ಅನಂದ್, ಇಮ್ರಾನ್ ಹಮದ್, ಜಗದೀಶ್ ಸೂಕ್ತ ಬಂದೋಬಸ್ತ್ ಮಾಡಿದ್ದರು. ಹುಣಸೂರು ಅಂಚೆ ಉಪ ವಿಭಾಗದ ಅಧಿಕಾರಿ ಅಭಿನಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.