ADVERTISEMENT

ಮೈಸೂರು: ‘ಕ್ಷೌರ ಕುಟೀರ’ ಸ್ಥಾಪಿಸಲಿ

ಅಂತರರಾಜ್ಯ ಕರ್ಪೂರಿ ಠಾಕೂರ್‌ ಮಹಾಸಭಾದ ನಾಮದೇವ್‌ ನಾಗರಾಜ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 11:35 IST
Last Updated 25 ಜನವರಿ 2020, 11:35 IST
ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕೇಶ ಶಿಲ್ಪಿಗಳು’ ಪುಸ್ತಕವನ್ನು ನಾಮದೇವ ನಾಗರಾಜ್‌ ಬಿಡುಗಡೆ ಮಾಡಿದರು. ಸ್ವದೇಶಿ ವಿಶ್ವಣ್ಣ, ಎಂ.ಬಿ.ಶಿವಕುಮಾರ್‌, ಬಿ.ಎಂ.ಶ್ರೀನಿವಾಸ್‌, ಪ್ರೊ.ಪಿ.ಬಿ.ವೆಂಕಟಾಚಲಪತಿ, ಎನ್‌.ಆರ್‌.ನಾಗೇಶ್‌, ಸೌಮ್ಯರಾಣಿ ಮುರಳೀಧರ್‌ ಇದ್ದರು
ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಕೇಶ ಶಿಲ್ಪಿಗಳು’ ಪುಸ್ತಕವನ್ನು ನಾಮದೇವ ನಾಗರಾಜ್‌ ಬಿಡುಗಡೆ ಮಾಡಿದರು. ಸ್ವದೇಶಿ ವಿಶ್ವಣ್ಣ, ಎಂ.ಬಿ.ಶಿವಕುಮಾರ್‌, ಬಿ.ಎಂ.ಶ್ರೀನಿವಾಸ್‌, ಪ್ರೊ.ಪಿ.ಬಿ.ವೆಂಕಟಾಚಲಪತಿ, ಎನ್‌.ಆರ್‌.ನಾಗೇಶ್‌, ಸೌಮ್ಯರಾಣಿ ಮುರಳೀಧರ್‌ ಇದ್ದರು   

ಮೈಸೂರು: ಕ್ಷೌರಿಕರಿಗಾಗಿ, ರಾಜ್ಯದೆಲ್ಲೆಡೆ ‘ಕ್ಷೌರ ಕುಟೀರ’ಗಳನ್ನು ಸ್ಥಾಪಿಸಬೇಕು ಎಂದು ಅಂತರರಾಜ್ಯ ಕರ್ಪೂರಿ ಠಾಕೂರ್‌ ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಾಮದೇವ ನಾಗರಾಜ್‌ ಶುಕ್ರವಾರ ಇಲ್ಲಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸವಿತಾ ಸಮಾಜದ ಮೈಸೂರು ಜಿಲ್ಲಾ ಘಟಕದ ವತಿಯಿಂದ ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚರ್ಮ ಕುಶಲಕರ್ಮಿಗಳಿಗೆ ಚರ್ಮ ಕುಟೀರಗಳನ್ನು ಸ್ಥಾಪಿಸಲಾಗುತ್ತಿದೆ. ಅದೇ ರೀತಿಯಲ್ಲಿ ಕ್ಷೌರ ಕುಟೀರಗಳನ್ನು ಸ್ಥಾಪಿಸುವ ಮೂಲಕ ಈ ಸಮುದಾಯದವರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‌‘ಮೈಸೂರು ಭಾಗದಲ್ಲಿರುವ ಸವಿತಾ ಸಮಾಜದವರು ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸದೃಢರಾಗಿದ್ದಾರೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿರುವ ಸಮಾಜದವರು ತೀರಾ ಕಷ್ಟದಲ್ಲಿದ್ದಾರೆ. ಅವರ ಅಭಿವೃದ್ಧಿಗೂ ನಾವೆಲ್ಲಾ ಶ್ರಮಿಸಬೇಕು’ ಎಂದರು.

ಸವಿತಾ ಸಮಾಜದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌.ನಾಗೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪಸಿಂಹ ಸೇರಿದಂತೆ ಸ್ಥಳೀಯ ಶಾಸಕರಿಗೂ ಆಹ್ವಾನ ನೀಡಿದ್ದೆವು. ಅವರು ಮೈಸೂರಿನಲ್ಲಿ ಇದ್ದರೂ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಯಾರು ನಮ್ಮನ್ನು ಇಷ್ಟಪಡುವುದಿಲ್ಲವೋ, ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಾರೋ ಅಂತಹ ರಾಜಕಾರಣಿಗಳಿಂದ ನಾವೂ ದೂರ ಇರಬೇಕು. ರಾಜಕಾರಣಿಗಳು ನಯವಾಗಿ ವಂಚನೆ ಮಾಡಿದಂತೆಯೇ ನಾವೂ ನಯವಾಗಿಯೇ ಅವರನ್ನು ತಿರಸ್ಕರಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಪ್ರೊ.ಪಿ.ಬಿ.ವೆಂಕಟಾಚಲಪತಿ ರಚಿಸಿರುವ ‘ಕೇಶ ಶಿಲ್ಪಿಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು.

ಅಂತರರಾಜ್ಯ ಕರ್ಪೂರಿ ಠಾಕೂರ್‌ ಮಹಾಸಭಾದ ಅಧ್ಯಕ್ಷ ಎಂ.ಬಿ.ಶಿವಕುಮಾರ್‌, ಬನ್ನೂರು ಪುರಸಭಾ ಸದಸ್ಯೆ ಸೌಮ್ಯರಾಣಿ ಮುರಳೀಧರ್‌, ಸವಿತಾ ಸಮಾಜದ ಮುಖಂಡರಾದ ಬಿ.ಎಂ.ಶ್ರೀನಿವಾಸ್‌, ಸ್ವದೇಶಿ ವಿಶ್ವಣ್ಣ, ಹರೀಶ್‌, ಶಿವಣ್ಣ, ವಿ.ಆಂಜನಪ್ಪ, ಇ.ರಾಜು, ನಾಗೇಂದ್ರ, ಅಡಕಮಾರನಹಳ್ಳಿ ಶ್ರೀನಿವಾಸ್‌ ಇದ್ದರು.

‘ದಸರಾ ಮೆರವಣಿಗೆಯಲ್ಲಿ ಸವಿತಾ ಸಮಾಜದ ಸ್ತಬ್ಧಚಿತ್ರ ಇರಲಿ’

‘ಸವಿತಾ ಸಮಾಜದ ಇತಿಹಾಸವನ್ನು ಸಾರುವ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅವಕಾಶ ನೀಡಬೇಕು ಎಂದು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮನವಿ ಮಾಡಿದ್ದೆವು. ಪ್ರಧಾನಿಗೆ ಟ್ವೀಟ್‌ ಸಹ ಮಾಡಿದ್ದೆ. ಆದರೆ, ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ಮೈಸೂರು ದಸರಾ ಮೆರವಣಿಗೆಯಲ್ಲಾದರೂ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವಂತೆ ಸರ್ಕಾರದ ಮೇಲೆ ಎಲ್ಲರೂ ಒತ್ತಡ ಹೇರಬೇಕು’ ಎಂದು ನಾಮದೇವ್‌ ನಾಗರಾಜ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.