ADVERTISEMENT

ಶಾಲೆ ಕೆಡವಿ ‘ಮಾಲ್‌’ಗೆ ಸಿದ್ಧತೆ

ತೆರೆ ಮರೆಗೆ ಸರಿಯಲಿದೆ ನೂರು ವರ್ಷದ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:56 IST
Last Updated 10 ಮೇ 2019, 19:56 IST
ಎಸ್.ಅಚ್ಚುತ
ಎಸ್.ಅಚ್ಚುತ   

ಮೈಸೂರು: ನಗರದ ನೂರು ವರ್ಷ ಹಳೆಯ ಸರ್ಕಾರಿ ಶಾಲೆ ತೆರೆ ಮರೆಗೆ ಸರಿಯುತ್ತಿದೆ. ಈ ಶಾಲೆಯ ಕಟ್ಟಡವನ್ನು ಉರುಳಿಸಿ ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಿದ್ಧತೆ ಸದ್ದಿಲ್ಲದೇ ಆರಂಭವಾಗಿದೆ.

ನಗರದ ಇಟ್ಟಿಗೆಗೂಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದು. ಜಯಚಾಮರಾಜೇಂದ್ರ ಒಡೆಯರ್‌ ಅವರ ಕಾಲದಲ್ಲಿ ನಿರ್ಮಾ ಣವಾಗಿದ್ದ ‍ಪುರಾತನ ಶಾಲೆಯಿದು. ಹಾಗಾಗಿ, ಈ ಶಾಲೆಗೆ ಪಾರಂಪರಿಕ ಮಹತ್ವವಿದೆ. ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಅನೇಕರು ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಗಳಿಗೆ ಏರಿದ್ದಾರೆ. ಆದರೆ, ನೋಂದಣಿ ಕಡಿಮೆ ಎಂಬ ಕಾರಣದಿಂದ ಶಾಲೆಯನ್ನು ಮುಚ್ಚಿ, ಅದರ ಜಾಗದಲ್ಲಿ ‘ಮಾಲ್‌’ ನಿರ್ಮಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ.

ಸ್ಥಳೀಯರ ಆಕ್ರೋಶ: ಶಿಕ್ಷಣದ ಜಾಗದಲ್ಲಿ ವಾಣಿಜ್ಯೀಕರಣಕ್ಕೆ ಬೆಂಬಲ ನೀಡಲಾಗುತ್ತಿದೆ ಎನ್ನುವುದು ಸ್ಥಳೀ ಯರ ಆರೋಪವಾಗಿದೆ. ನೂರು ವರ್ಷದಿಂದ ಕಾರ್ಯನಿರ್ವಹಿಸಿರುವ ಶಾಲೆಯನ್ನು ಉದ್ದೇಶಪೂರ್ವಕವಾಗಿ ಶಿಥಿಲವಾಗುವಂತೆ ಮಾಡಲಾಗಿದೆ. ಶಾಲೆಯ ಕಟ್ಟಡವನ್ನು ಸೂಕ್ತವಾಗಿ ನಿರ್ವ ಹಿಸಿಲ್ಲ. ಹಾಗಾಗಿ, ಶಾಲೆಯ ಗೋಡೆಗಳು ದುರ್ಬಲಗೊಂಡಿವೆ. ಈಗ ಇದನ್ನೇ ಮುಂದಿಟ್ಟುಕೊಂಡು ಒಡೆಯುವ ಹಂತಕ್ಕೆ ‘ಮುಡಾ’ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಲ್ಲದೇ, ಇಟ್ಟಿಗೆಗೂಡಿನಲ್ಲಿ ಒಂದು ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಬಿಟ್ಟರೆ, ಇತರೆ ಯಾವುದೇ ಸರ್ಕಾರಿ ಶಾಲೆಯಿಲ್ಲ. ಕಾಲೇಜುಗಳೂ ಸಾಕಷ್ಟು ದೂರವಿವೆ. ಈ ಭಾಗದಲ್ಲಿ ಶೈಕ್ಷಣಿಕ ವಾತಾವರಣವನ್ನು ಕಾಪಾಡುತ್ತಿದ್ದದ್ದು ಇದೊಂದೇ ಶಾಲೆ. ಈ ಶಾಲೆಯ ಕಟ್ಟಡವನ್ನು ದುರಸ್ತಿಗೆ ಒಳಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರೆ ನೋಂದಣಿ ಏಕಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕಾಲು ಎಕರೆ ಜಾಗ: ಈ ಶಾಲೆಗೆ ಕಾಲು ಎಕರೆಯಷ್ಟು ಜಾಗವಿದೆ. ಶಾಲೆಯ 3 ಬದಿಗಳಲ್ಲೂ ರಸ್ತೆಯಿದೆ. ಹಾಗಾಗಿ, ಇದನ್ನು ಕೆಡವಿ ವಾಣಿಜ್ಯ ಸಂಕೀರ್ಣ ಮಾಡಬೇಕು ಎನ್ನುವುದು ‘ಮುಡಾ’ ಉದ್ದೇಶ. ಅಂದಿನ ನಗರಾಭಿವೃದ್ಧಿ ಟ್ರಸ್ಟ್‌ ಬೋರ್ಡ್‌ (ಸಿಐಟಿಬಿ), ನಗರಪಾಲಿಕೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಶಾಲೆಯನ್ನು ನಡೆಸುತ್ತಿದ್ದವು. ಶಾಲೆಗೆ 2013ರಿಂದ ಈಚೆಗೆ ಮಕ್ಕಳ ದಾಖಲಾತಿ ಕಡಿಮೆಯಾಗಿದ್ದು, 30ಕ್ಕಿಂತ ಕಡಿಮೆಯಾಗಿತ್ತು. 30 ಮಕ್ಕಳಿಗೆ ಒಬ್ಬ ಶಿಕ್ಷಕ ಎಂಬ ನಿಯಮ ಜಾರಿಯಲ್ಲಿರುವ ಕಾರಣ, ಶಿಕ್ಷಕರನ್ನು ಬೇರೆ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಲಾಯಿತು. ಹಾಗಾಗಿ, ಶಾಲೆ ಮುಚ್ಚುವಂತೆ ಆಯಿತು ಎಂದು ಶಾಲೆಯ ಹಿರಿಯ ವಿದ್ಯಾರ್ಥಿ, ಲೆಕ್ಕಸನ್ನದುದಾರ ಎಸ್.ಅಚ್ಚುತ ಬೇಸರ ವ್ಯಕ್ತಪಡಿಸಿದರು.

ಪ್ರಸಿದ್ಧ ಉದ್ಯಮಿ ಶಾಮಣ್ಣ, ನಗರ ಪಾಲಿಕೆ ಸದಸ್ಯರಾಗಿದ್ದ ಎಂ.ಎಸ್.ಸತ್ಯ ನಾರಾಯಣ, ರಾಮಕೃಷ್ಣಪ್ಪ ಸೇರಿದಂತೆ ಸಾವಿರಾರು ಮಂದಿ ಇಲ್ಲಿ ಓದಿದ್ದಾರೆ. ಶಾಲೆಗೆ ಪ್ರೋತ್ಸಾಹ ನೀಡಿ ದಾಖಲಾತಿ ಹೆಚ್ಚುವಂತೆ ಮಾಡಬೇಕೇ ಹೊರತು, ಕೆಡವಿ ‘ಮಾಲ್‌’ ಕಟ್ಟಬಾರದು ಎಂದು ಅವರು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.