ADVERTISEMENT

ಶಾಲೆಗಳತ್ತ ಹೆಜ್ಜೆ ಹಾಕಿದ ಮಕ್ಕಳು

ತಳಿರು ತೋರಣ ಕಟ್ಟಿ ಸಂಭ್ರಮಿಸಿದ ಶಿಕ್ಷಕರು l ಶಾಲೆ ತೆರೆದಿದ್ದು ಒಳ್ಳೆಯದಾಯಿತು ಎಂದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 3:08 IST
Last Updated 2 ಜನವರಿ 2021, 3:08 IST
ಮೈಸೂರಿನ ರೋಟರಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಬರಮಾಡಿಕೊಳ್ಳಲಾಯಿತು
ಮೈಸೂರಿನ ರೋಟರಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಬರಮಾಡಿಕೊಳ್ಳಲಾಯಿತು   

ಮೈಸೂರು: ಕೆಲವು ಶಾಲೆಗಳಲ್ಲಿ ತಳಿರು ತೋರಣ ಕಟ್ಟಿದರೆ, ಮತ್ತೆ ಕೆಲವು ಶಾಲೆಗಳಲ್ಲಿ ರಂಗವಲ್ಲಿ ಹಾಕಲಾಗಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಇದೇ ಮೊದಲ ಬಾರಿಗೆ ತರಗತಿಗೆ ಬಂದ ವಿದ್ಯಾರ್ಥಿಗಳನ್ನು ಹಲವೆಡೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಶಿಕ್ಷಕರು ಹಬ್ಬದಂತೆ ಸಂಭ್ರಮಿಸಿದರು.

ಇಲ್ಲಿನ ಎನ್.ಆರ್.ಮೊಹಲ್ಲಾದ ಸರ್ಕಾರಿ ಪ್ರೌಢಶಾಲೆಯನ್ನು ತಳಿರು ತೋರಣಗಳಿಂದ ಹಬ್ಬದಂತೆ ಸಿಂಗರಿಸ
ಲಾಗಿತ್ತು. ಕುಂಬಾರಕೊಪ್ಪಲಿನ ಸರ್ಕಾರಿ ಶಾಲೆಯ ಮುಂದೆ ರಂಗವಲ್ಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾ
ಯಿತು. ಗಿರಿಯಾಬೋವಿ ಪಾಳ್ಯದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೆಲೂನ್ ವಿತರಿಸುವ ಮೂಲಕ ತರಗತಿಗಳತ್ತ ಸೆಳೆಯಲಾಯಿತು.

ಎನ್.ಆರ್.ಮೊಹಲ್ಲಾದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಕಾಂಚನಾ
ಮಾಲಾ ವಿದ್ಯಾರ್ಥಿಗಳಿಗೆ ಚಾಕೊಲೆಟ್‌ಗಳನ್ನು ವಿತರಿಸಿದರು. ಕುಂಬಾರಕೊಪ್ಪಲಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ನೀಡಲಾಯಿತು. ಮಕ್ಕಳೂ ಖುಷಿಯಾಗಿ ಸಂಭ್ರಮಿಸುತ್ತಲೇ ಶಾಲೆಗೆ ಬಂದರು.

ADVERTISEMENT

ಮೊಬೈಲ್‌ ಇಲ್ಲ, ಟಿ.ವಿ ಇಲ್ಲ; ಶಾಲೆ ತೆರೆದಿದ್ದು ಒಳ್ಳೆಯದಾಯಿತು: ಇಲ್ಲಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆಗೆ ಬಂದ ಬಹುತೇಕ ವಿದ್ಯಾರ್ಥಿಗಳು ಶಾಲೆ ತೆರೆದಿದ್ದು ಒಳ್ಳೆಯದಾಯಿತು ಎಂದು ಅಭಿಪ್ರಾಯಪಟ್ಟರು. ‘ನಮ್ಮ ಬಳಿ ಮೊಬೈಲ್ ಇಲ್ಲ, ಟಿ.ವಿಯೂ ಇಲ್ಲ. ಆನ್‌ಲೈನ್‌ ತರಗತಿಗಳಾಗಲಿ, ಟಿ.ವಿಯಲ್ಲಿ ಬರುವ ಶೈಕ್ಷಣಿಕ ಕಾರ್ಯಕ್ರಮಗಳಾಗಲಿ ನಮಗೆ ತಲುಪುತ್ತಿಲ್ಲ. ಈಗ ಶಾಲೆ ತೆರೆದಿದ್ದು ನಿಜಕ್ಕೂ ಖುಷಿಯಾಗಿದೆ’ ಎಂದು ವಿದ್ಯಾರ್ಥಿನಿ ಉಲ್ಲಾಸಕುಮಾರಿ ಹೇಳಿದರು.

ಖಾಸಗಿ ಶಾಲೆಗಳಲ್ಲಿ ಗೊಂದಲ: ನಗರದಲ್ಲಿ ಕೆಲವು ಅನುದಾನ ರಹಿತ ಶಾಲೆಗಳು ಕಾರ್ಯನಿರ್ವಹಿಸಿದರೆ, ಮತ್ತೆ ಕೆಲವು ಶಾಲೆಗಳು ಕಾರ್ಯನಿರ್ವಹಿ
ಸಲಿಲ್ಲ. ಕಾರ್ಯನಿರ್ವಹಿಸಿದ ಶಾಲೆಗಳಲ್ಲಿಯೂ ಕೇವಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಬೋಧನೆ ಆರಂಭಿಸಲಾಯಿತು. ವಿದ್ಯಾಗಮಕ್ಕೆ ಒಳಪಟ್ಟ ವಿದ್ಯಾರ್ಥಿಗಳಿಗೆ ಜ. 4ರಿಂದ ಶಾಲೆಗೆ ಬರುವಂತೆ ಸೂಚಿಸಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ಮ್ಯಾನೇಜ್‌ಮೆಂಟ್‌ ಅಸೋಸಿಯೇಷನ್‌ (ಕ್ಯಾಮ್ಸ್)ನ ಜಿಲ್ಲಾ ಸಂಯೋಜಕ ಸಂತೋಷ್‌ಕುಮಾರ್, ‘ನಮ್ಮ ಸಂಘಟನೆ ವ್ಯಾಪ್ತಿಗೆ ಒಳಪಡುವ ಬಹುತೇಕ ಶಾಲೆಗಳಲ್ಲಿ ಹತ್ತನೇ ತರಗತಿ ಆರಂಭವಾಗಿದೆ. ಜ. 4ರಿಂದ ವಿದ್ಯಾಗಮ ಸಹ ಆರಂಭವಾಗಲಿದೆ’ ಎಂದರು.

ಸಿಬಿಎಸ್‍ಇ ಮತ್ತು ಐಸಿಎಸ್‍ಇ ಸ್ಟೇಟ್ ಬೋರ್ಡ್ ಪ್ರೈವೇಟ್ ಸ್ಕೂಲ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ (ಸಿಐಎಸ್‍ಪಿಎಂಎಎಂ) ಅಧ್ಯಕ್ಷ ಸುಧಾಕರ ಎಸ್ ಶೆಟ್ಟಿ ಪ್ರತಿಕ್ರಿಯಿಸಿ, ‘ನಮ್ಮ ವ್ಯಾಪ್ತಿಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಿಂದ ಒಟ್ಟು 240 ಶಾಲೆಗಳಿವೆ. ಇಲ್ಲೆಲ್ಲೂ ತರಗತಿಗಳನ್ನು ಆರಂಭಿಸಿಲ್ಲ. ಮತ್ತೊಮ್ಮೆ ಭಾನುವಾರ ಸಭೆ ನಡೆಸಲಿದ್ದೇವೆ. ಸರ್ಕಾರ ಸಂಕಷ್ಟದಲ್ಲಿರುವ ಶಾಲೆಗಳ ನೆರವಿಗೆ ಬರಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.