
ಸಾಲಿಗ್ರಾಮ: ಚುಂಚನಕಟ್ಟೆ ಕೋದಂಡರಾಮ ರಥೋತ್ಸವ ಪ್ರಯುಕ್ತ ನಡೆಯುವ ‘ಸೀತಾರಾಮ ಕಲ್ಯಾಣೋತ್ಸವ’ವು ಸಾವಿರಾರು ಭಕ್ತರ ಜಯ ಘೋಷಣೆಯೊಂದಿಗೆ ಮಂಗಳವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ಕಲ್ಯಾಣೋತ್ಸವಕ್ಕೆ ದೇವಾಲಯದ ಅರ್ಚಕರ ವೃಂದ ಸಕಲ ಸಿದ್ದತೆ ಮಾಡಿಕೊಂಡಿದ್ದರು.
ಮುಂಜಾನೆಯಿಂದಲೇ ಕೋದಂಡರಾಮನ ದೇವಾಲಯದ ಪ್ರಾಂಗಣದಲ್ಲಿ ಕಲ್ಯಾಣೋತ್ಸವಕ್ಕಾಗಿ ನಿರ್ಮಾಣ ಮಾಡಲಾಗಿದ್ದ ವೇದಿಕೆಯನ್ನು ಅರ್ಚಕರು ಹೂವಿನಿಂದ ಅಲಂಕಾರ ಮಾಡಿ ಹಸಿರು ತೋರಣವನ್ನು ಕಟ್ಟಿದ್ದರು. ಧಾರ್ಮಿಕ ಸಂಪ್ರದಾಯದಂತೆ ಸಂಜೆಯಿಂದ ಮುಖ್ಯ ಕೈಂಕರ್ಯ ಪ್ರಾರಂಭಗೊಂಡಿತು.
ಶಾಸಕ ಡಿ.ರವಿಶಂಕರ್ ಹಾಗೂ ಸುನೀತಾ ರವಿಶಂಕರ್ ವರನ ಪರವಾಗಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ ಹಾಗೂ ವನಜಾಕ್ಷಮ್ಮ ವಧುವಿನ ಕಡೆಯಿಂದ ಮದುವೆ ಶಾಸ್ತ್ರಕ್ಕೆ ಮುಂದಾದರು. ಅರ್ಚಕರ ಮಾರ್ಗದರ್ಶನದಂತೆ ವರ ಮತ್ತು ವಧುವಿನ ಮೂರ್ತಿಯನ್ನು ಕಲ್ಯಾಣ ಮಂಟಪಕ್ಕೆ ತರಲಾಯಿತು. ಸಂಪ್ರದಾಯದಂತೆ ಮಾಂಗಲ್ಯಧಾರಣೆ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷ ಮುಗಿಲುಮುಟ್ಟಿತು.
ಕಲ್ಯಾಣೋತ್ಸವದಲ್ಲಿ ಕಂಕಣ ಭಾಗ್ಯ ಸಿಗದ ಬಹುತೇಕ ಮಂದಿ ಯುವಕ, ಯುವತಿಯರು ಭಾಗವಹಿಸಿದ್ದ ವಿಶೇಷವಾಗಿತ್ತು.
ಭಕ್ತರಿಗೆ ಉದ್ಯಮಿ ಸಿ.ಜೆ.ದ್ವಾರಕೀಶ್, ಕಾಂಗ್ರೆಸ್ ಮುಖಂಡ ಹಾಡ್ಯಮಹದೇವಸ್ವಾಮಿ, ಜೆಡಿಎಸ್ ಮುಖಂಡ ಸಿ.ಬಿ.ಲೋಕೇಶ್, ಕುಪ್ಪೆಗ್ರಾಮ ಪಂಚಾಯಿತಿ ಸದಸ್ಯ ಸಿ.ಬಿ.ಧರ್ಮ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಸಾಲಿಗ್ರಾಮ ಟೌನ್ ಅಧ್ಯಕ್ಷ ಪ್ರಭಾಕರ್, ಡೇರಿ ಮಾಧು, ಎಚ್.ಜಿ.ರಮೇಶ್, ಹಳಿಯೂರು ಪ್ರಭಾಕರ್, ಸಚಿನ್, ಚಂದು, ನಟರಾಜ್, ಗಂಧನಹಳ್ಳಿ ಹೇಮಂತ್, ಹುಣಸೂರು ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಶೀಲ್ದಾರ್ ರುಕಿಯಾಬೇಗಂ, ಉಪತಹಶೀಲ್ದಾರ್ ಮಿರ್ಲೆಮಹೇಶ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.