ADVERTISEMENT

ಸೀವೇಜ್‌ ಫಾರಂ ಕಸ ಸಂಪೂರ್ಣ ವಿಲೇವಾರಿ

ಶಾಸಕ ಎಸ್.ಎ.ರಾಮದಾಸ್ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 12:53 IST
Last Updated 23 ಮಾರ್ಚ್ 2023, 12:53 IST
ಮೈಸೂರಿನ ಜೆ.ಪಿ. ನಗರದಲ್ಲಿ ಗುರುವಾರ ಯೋಗಕ್ಷೇಮ ಯಾತ್ರೆ ನಡೆಸಿದ ಶಾಸಕ ಎಸ್.ಎ.ರಾಮದಾಸ್ ಮಗುವೊಂದನ್ನು ಅಕ್ಕರೆಯಿಂದ ಮಾತನಾಡಿಸಿದರು
ಮೈಸೂರಿನ ಜೆ.ಪಿ. ನಗರದಲ್ಲಿ ಗುರುವಾರ ಯೋಗಕ್ಷೇಮ ಯಾತ್ರೆ ನಡೆಸಿದ ಶಾಸಕ ಎಸ್.ಎ.ರಾಮದಾಸ್ ಮಗುವೊಂದನ್ನು ಅಕ್ಕರೆಯಿಂದ ಮಾತನಾಡಿಸಿದರು   

ಮೈಸೂರು: ‘ಸೀವೇಜ್ ಫಾರಂ ಕಸದ ಸಮಸ್ಯೆಗೆ ಒಂದು ವರ್ಷದಲ್ಲಿ ಮುಕ್ತಿ ನೀಡಲಾಗುವುದು’ ಎಂದು ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 63ನೇ ವಾರ್ಡ್‌ನ ಜೆ.ಪಿ. ನಗರದ ಗೊಬ್ಬಳಿ ಮರದ ಸಮೀಪದ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಗುರುವಾರ ನಡೆದ ಯೋಗಕ್ಷೇಮ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ದಶಕಗಳಿಂದಲೂ ಸೀವೇಜ್ ಫಾರಂನಲ್ಲಿ‌ ಕಸ ಸಂಗ್ರಹವಾಗಿ ಈ ಭಾಗದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ನಂತರ ನಡೆದ ಸತತ ಪ್ರಯತ್ನದ ಫಲವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ₹ 56 ಕೋಟಿ ಅನುದಾನ ನೀಡಿದ್ದಾರೆ. ಪರಿಣಾಮ, ಒಂದು ವರ್ಷದೊಳಗೆ ಕಸವೆಲ್ಲವೂ ಸಿಮೆಂಟ್ ಕಾರ್ಖಾನೆಗೆ ಹೋಗಲಿದೆ.‌ ಇದಕ್ಕಾಗಿ ಯೋಜನೆ ರೂಪಿಸಲಾಗಿದೆ. ಜೊತೆಗೆ, ಇದೇ ತಿಂಗಳು ಕೆಸರೆ ಬಡಾವಣೆಯ ಘಟಕ ಕಾರ್ಯಾರಂಭ ಮಾಡಲಿದೆ.‌ ನಂತರದ ಕೆಲ ದಿನಗಳಲ್ಲಿ ರಾಯನಕೆರೆ ಘಟಕ ಆರಂಭವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಇಡೀ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ಎಲ್ಲವೂ ಪೂರ್ಣಗೊಳ್ಳಲಿವೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ‌482 ಕಿ.ಮೀ. ರಸ್ತೆ ಸಂಪೂರ್ಣವಾಗಿ ಡಾಂಬರೀಕರಣವಾಗಲಿದೆ. ಒಳಚರಂಡಿ ಮತ್ತು ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ’ ಎಂದರು.

‘₹ 34 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, 584 ಕೊಳವೆಬಾವಿಗಳನ್ನು ಇನ್ನೊಂದು ತಿಂಗಳಲ್ಲಿ ನಿಲ್ಲಿಸಿ ಇಡೀ ಕ್ಷೇತ್ರಕ್ಕೆ ಕಾವೇರಿ ಹಾಗೂ ಕಪಿಲಾ ನೀರು ಪೂರೈಸಲಾಗುವುದು. 120 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 13 ಸ್ಮಶಾನಗಳ ಅಭಿವೃದ್ಧಿ ಭರದಿಂದ ಸಾಗಿದೆ. ಶ್ವಾನಗಳ ಸಲುವಾಗಿ ಪುನರ್ವಸತಿ ಕೇಂದ್ರ ತೆರೆಯಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.