ಮೈಸೂರು: ‘ನಗರದ ಆಡಳಿತ ತರಬೇತಿ ಸಂಸ್ಥೆ (ಎಟಿಐ)ಯಿಂದ ಪ್ರತಿ ವರ್ಷ ಸರಾಸರಿ 280 ಕಾರ್ಯಕ್ರಮ ಮೂಲಕ 8,400 ಗ್ರೂಪ್ ‘ಎ’ ಮತ್ತು ‘ಬಿ’ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಆಗಿರುವ ಎಟಿಐ ಮಹಾನಿರ್ದೇಶಕಿ ಶಾಲಿನಿ ರಜನೀಶ್ ಹೇಳಿದರು.
ತ್ರಿಪುರದ ಆಡಳಿತ ಸೇವೆಗೆ ಸೇರಿದ 2024ನೇ ಬ್ಯಾಚ್‌ನ ‘ಎ’ ವೃಂದದ 30 ಅಧಿಕಾರಿಗಳಿಗೆ ಮೇ 12ರವರೆಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮವನ್ನು ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ರಾಜ್ಯದ ಉತ್ತಮ ಆಡಳಿತದ ಬಗ್ಗೆ ತಿಳಿದುಕೊಳ್ಳಲು ಬರುವ ಇತರ ರಾಜ್ಯಗಳ ಅಧಿಕಾರಿಗಳಿಗೆ ಎಟಿಐನಿಂದ ತರಬೇತಿ ನೀಡುತ್ತಿರುವುದು ಹೆಮ್ಮೆಯ ವಿಷಯ’ ಎಂದರು.
‘ರಾಜ್ಯದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಉತ್ತಮ ಆಡಳಿತ ಹಾಗೂ ನಾಗರಿಕ ಸ್ನೇಹಿ ಯೋಜನೆಗಳಾದ ‘ಭೂಮಿ, ‘ಮೋಜಿಣಿ’, ‘ಸೇವಾಸಿಂಧು, ‘ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ’, ‘ಕೂಸಿನ ಮನೆ’ ಮೊದಲಾದವುಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಪ್ರಶಿಕ್ಷಣಾರ್ಥಿಗಳು ಮೈಸೂರಿನ ಪಾರಂಪರಿಕ ಸ್ಥಳಗಳು, ಚಾಮರಾಜನಗರ ಜಿಲ್ಲೆಯ ನಿಟ್ರೆ ಗ್ರಾಮ ಪಂಚಾಯಿತಿಗೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬoಧಿಸಿದoತೆ ಮೈಸೂರು ಮಹಾನಗರ ಪಾಲಿಕೆ ಕಚೇರಿ ಭೇಟಿ ನೀಡಲಿದ್ದಾರೆ’ ಎಂದು ತಿಳಿಸಿದರು.
ಎಟಿಐ ಜಂಟಿ ನಿರ್ದೇಶಕಿ (ಆಡಳಿತ), ರೂಪಶ್ರೀ ಕೆ., ಜಂಟಿ ನಿರ್ದೇಶಕಿ (ತರಬೇತಿ) ಸಾಧನಾ ಅಶೋಕ್ ಪೋಟೆ, ತರಬೇತಿ ನಿರ್ದೇಶಕಿ ಎಂ.ಆರ್.ಕವಿತಾ ಹಾಗೂ ಬೋಧಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.