ADVERTISEMENT

‘ಶಂಕರ ಕಪ್‌’ ಕ್ರಿಕೆಟ್‌ ಟೂರ್ನಿಗೆ ಚಾಲನೆ

ಜಿಲ್ಲಾ ಬ್ರಾಹ್ಮಣ ಸಂಘ, ಬ್ರಾಹ್ಮಣ ಯುವ ವೇದಿಕೆಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:08 IST
Last Updated 24 ಮೇ 2019, 20:08 IST
ಕ್ರಿಕೆಟ್‌ ಟೂರ್ನಿಗೆ ಡಿ.ಟಿ.ಪ್ರಕಾಶ್‌ ಅವರು ಚಾಲನೆ ನೀಡಿದರು. ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಮುಖಂಡರು ಇದ್ದಾರೆ
ಕ್ರಿಕೆಟ್‌ ಟೂರ್ನಿಗೆ ಡಿ.ಟಿ.ಪ್ರಕಾಶ್‌ ಅವರು ಚಾಲನೆ ನೀಡಿದರು. ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಮುಖಂಡರು ಇದ್ದಾರೆ   

ಮೈಸೂರು: ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ವಿಪ್ರ ಯುವ ಸಂಘಟನೆಗಳಿಗಾಗಿ ಆಯೋಜಿಸಿರುವ ‘ಶಂಕರ ಕಪ್‌’ ರಾಜ್ಯಮಟ್ಟದ ಕ್ರಿಕೆಟ್‌ ಟೂರ್ನಿಗೆ ಶುಕ್ರವಾರ ಚಾಲನೆ ಲಭಿಸಿತು.

ಗಂಗೋತ್ರಿಯ ಕಾಫಿ ಬೋರ್ಡ್‌ ಮೈದಾನದಲ್ಲಿ ಮೇ 26ರ ವರೆಗೆ ಆಯೋಜಿಸಿರುವ ಟೂರ್ನಿಯನ್ನು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್‌ ಉದ್ಘಾಟಿಸಿದರು.

ಟೂರ್ನಿಯಲ್ಲಿ ಒಟ್ಟು 20 ಜಿಲ್ಲೆಗಳ ತಂಡಗಳು ಪಾಲ್ಗೊಂಡಿವೆ. ಮೊದಲ ದಿನ ಬೆಂಗಳೂರು, ಚಿತ್ರದುರ್ಗ, ಮಂಡ್ಯ, ಹಾಸನ, ಗೋಕರ್ಣ, ಶಿವಮೊಗ್ಗದ ತಂಡಗಳು ಅಲ್ಲದೆ ಹೊಯ್ಸಳ ಕರ್ನಾಟಕ, ಮುಖ್ಯಪ್ರಾಣ, ಗೋಕರ್ಣ, ವಿದ್ಯಾಪೀಠ ಶ್ರೀಹರಿ ಸಮರ್ಥಾಸ್, ರಾಮಾನುಜ ಹಾಗೂ ಶಂಕರ ಯುವ ತಂಡಗಳು ಕಣಕ್ಕಿಳಿದವು.

ADVERTISEMENT

ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಡಿ.ಟಿ.ಪ್ರಕಾಶ್, ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ಯುವಕರನ್ನು ರಾಜ್ಯದೆಲ್ಲೆಡೆ ಪ್ರಮುಖ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ತರಬೇಕಿದೆ. ಕ್ರಿಕೆಟ್ ಕ್ರೀಡೆ ಮೂಲಕ ಬ್ರಾಹ್ಮಣ ಯುವಕರನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವ ಸಲುವಾಗಿ ಶಂಕರ ಕಪ್‌ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೇಯರ್‌ ಪುಷ್ಪಲತಾ ಜಗನ್ನಾಥ್‌ ಮಾತನಾಡಿ, ಶಂಕರಾಚಾರ್ಯರು ಕೇವಲ 31ವರ್ಷ ಬದುಕಿದ್ದರೂ ಮೂರು ಬಾರಿ ದೇಶ ಪರ್ಯಟನೆ ಮಾಡಿ ಶಕ್ತಿಪೀಠವನ್ನು ಸ್ಥಾಪಿಸಿದ್ದಾರೆ. ಅವರ 1,231ನೇ ಜಯಂತಿಯನ್ನು ತತ್ವಜ್ಞಾನಿಗಳ ದಿನವನ್ನಾಗಿ ನಾವು ಆಚರಿಸುತ್ತಿರುವುದು ಪುಣ್ಯದ ಕೆಲಸ ಎಂದು ಹೇಳಿದರು.

ಪಾಲಿಕೆ ಸದಸ್ಯ ಎಂ.ಸಿ ರಮೇಶ್ ಮಾತನಾಡಿ, ‘ಮೈಸೂರು ನಗರದಲ್ಲಿ ಬ್ರಾಹ್ಮಣರ ಸಂಖ್ಯೆ ಸುಮಾರು ಎರಡು ಲಕ್ಷದಷ್ಟಿದೆ. ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ನಗರದಲ್ಲಿ ಶಂಕರಾಚಾರ್ಯರ ಪ್ರತಿಮೆಯನ್ನು ಸ್ಥಾಪಿಸಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಆಗ್ರಹಿಸುತ್ತೇನೆ’ ಎಂದು ತಿಳಿಸಿದರು.

ಟೂರ್ನಿಯ ವಿಜೇತ ತಂಡಕ್ಕೆ ₹ 30 ಸಾವಿರ ನಗದು ಹಾಗೂ ಟ್ರೋಫಿ ಲಭಿಸಲಿದೆ. ‘ರನ್ನರ್‌ ಅಪ್‌’ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ ₹ 20 ಸಾವಿರ ಹಾಗೂ ₹ 10 ಸಾವಿರ ನಗದು ಬಹುಮಾನ ಪಡೆಯಲಿವೆ.

ಮೈಸೂರು ಬ್ರಾಹ್ಮಣ ಸಂಘದ ಕಾರ್ಯಾಧ್ಯಕ್ಷ ಕೃಷ್ಣದಾಸ್ ಪುರಾಣಿಕ್, ಸಮುದಾಯದ ಮುಖಂಡ ಕೆ.ಆರ್.ಮೋಹನ್ ಕುಮಾರ್, ಉಮೇಶ್ ಶರ್ಮ, ಡಾ.ಕೆ.ರಘುರಾಂ ವಾಜಪೇಯಿ, ಕೆ.ಆರ್.ಸತ್ಯನಾರಾಯಣ್, ಅಶ್ವಥ್ ನಾರಾಯಣ್, ಮಾ.ವಿ.ರಾಂಪ್ರಸಾದ್, ಬಾಲಕೃಷ್ಣ, ಗೋಪಿನಾಥ್, ಅಪೂರ್ವ ಸುರೇಶ್, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಎಚ್.ಎನ್.ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಳ್ಳೂರು ಗುರುಪ್ರಸಾದ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಜಯಸಿಂಹ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.