ADVERTISEMENT

ಶಾಂತಿಧಾಮ ಮೈಸೂರಿಗೆ ಮಾದರಿ

ಒಳ್ಳೆಯ ಕೆಲಸ ನಡೆದಿದೆ: ಮೇಯರ್ ತಸ್ನಿಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 12:59 IST
Last Updated 29 ಆಗಸ್ಟ್ 2020, 12:59 IST
ಮೈಸೂರಿನ ಅಶೋಕಪುರಂನ ಶಾಂತಿಧಾಮದಲ್ಲಿ ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಕಬಿನಿ ವತಿಯಿಂದ ₹ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇಯರ್‌ ತಸ್ನಿಂ ಶನಿವಾರ ಚಾಲನೆ ನೀಡಿದರು
ಮೈಸೂರಿನ ಅಶೋಕಪುರಂನ ಶಾಂತಿಧಾಮದಲ್ಲಿ ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಕಬಿನಿ ವತಿಯಿಂದ ₹ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೇಯರ್‌ ತಸ್ನಿಂ ಶನಿವಾರ ಚಾಲನೆ ನೀಡಿದರು   

ಮೈಸೂರು: ‘ಅಶೋಕಪುರಂನಲ್ಲಿರುವ ಶಾಂತಿಧಾಮ ಮೈಸೂರಿಗೆ ಮಾದರಿಯಾಗಿದೆ’ ಎಂದು ಪಾಲಿಕೆಯ ಮೇಯರ್ ತಸ್ನಿಂ ಶನಿವಾರ ಇಲ್ಲಿ ತಿಳಿಸಿದರು.

ಲಯನ್ಸ್‌ ಕ್ಲಬ್‌ ಆಫ್‌ ಮೈಸೂರು ಕಬಿನಿ ವತಿಯಿಂದ ಶಾಂತಿಧಾಮದಲ್ಲಿ ₹ 18 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗೌತಮ ಬುದ್ಧನ ಮೂರ್ತಿ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ, ಶವ ಸಾಗಣೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಉತ್ತಮ ಕೆಲಸ ಮಾಡುವ ಸಂಸ್ಥೆಗಳಿಗೆ ಪಾಲಿಕೆ ಸದಾ ಸಾಥ್‌ ನೀಡಲಿದೆ’ ಎಂದು ಹೇಳಿದರು.

‘ಅಭಿವೃದ್ಧಿ ಕೆಲಸಕ್ಕೆ ತೊಡಕುಂಟು ಮಾಡುವುದು ಸರಿಯಲ್ಲ. ರಾಜಕೀಯ ಸೇರ್ಪಡೆಯೂ ಬೇಕಿಲ್ಲ’ ಎಂದು ಮಾಜಿ ಉಪ ಮೇಯರ್ ವಿ.ಶೈಲೇಂದ್ರ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದರು.

ADVERTISEMENT

ಲಯನ್ಸ್‌ ಕ್ಲಬ್‌ನ ವಲಯ ಅಧ್ಯಕ್ಷ ಡಾ.ಪಿ.ಶ್ರೀನಿವಾಸ್‌ ಮಾತನಾಡಿ, ‘ಎರಡು ವರ್ಷದ ಹಿಂದೆ ಅಣ್ಣ ಮೃತಪಟ್ಟಾಗ, ಶ್ರೀರಾಂಪುರದಿಂದ ಶವ ಸಾಗಿಸಲು ಎದುರಾದ ತೊಂದರೆ ಗಮನದಲ್ಲಿದ್ದವು. ನಾನು ಲಯನ್ಸ್‌ ಕ್ಲಬ್‌ ಅಧ್ಯಕ್ಷನಾದಾಗ ಹಿರಿಯರನ್ನು ಕೇಳಿದ್ದಕ್ಕೆ ಊರಿಗಾಗಿ ಏನನ್ನಾದರೂ ಮಾಡು ಅಂದಿದ್ದರು. ಅವರ ಸೂಚನೆಯಂತೆ ಅಶೋಕಪುರಂನ ಶಾಂತಿಧಾಮದಲ್ಲಿ ವಿವಿಧ ಕಾಮಗಾರಿ ಕೈಗೊಂಡಿದ್ದೇವೆ. ಈ ಕೆಲಸ ಆತ್ಮತೃಪ್ತಿ ನೀಡಿದೆ’ ಎಂದು ಹೇಳಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ಇಲ್ಲಿ ನಡೆದಿರುವುದು ಸರ್ಕಾರಿ ಕಾರ್ಯಕ್ರಮವಲ್ಲ. ಖಾಸಗಿ ಸಂಸ್ಥೆಯೊಂದರ ಸೇವಾ ಕಾರ್ಯಕ್ರಮ. ಶಿಷ್ಟಾಚಾರದ ಪ್ರಶ್ನೆಯೇ ಬರಲ್ಲ. ಇದರ ಅರಿವಿಲ್ಲದೇ ಶೈಲೇಂದ್ರ ಪ್ರತಿಭಟಿಸಿದ್ದಾರೆ. ಅದು ತಪ್ಪು. ಲಯನ್ಸ್‌ ಸಂಸ್ಥೆ ಶ್ಲಾಘನಾರ್ಹ ಕೆಲಸ ಮಾಡಿದೆ. ಇಲ್ಲಿ ನಡೆದ ಪ್ರತಿಯೊಂದು ಅಭಿವೃದ್ಧಿಯೂ ಸಂಸದ ಶ್ರೀನಿವಾಸ ಪ್ರಸಾದ್‌ ಗಮನಕ್ಕೆ ಬಂದಿದೆ. ಅವರ ಹೆಸರನ್ನು ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುವುದು ತಪ್ಪು’ ಎಂದು ತಿಳಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ, ಲಯನ್ಸ್‌ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಭಟನೆ: ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ದೂರಿ ಮಾಜಿ ಉಪ ಮೇಯರ್ ವಿ.ಶೈಲೇಂದ್ರ ತನ್ನ ಬೆಂಬಲಿಗರೊಂದಿಗೆ ಪ್ರತಿಭಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.