ADVERTISEMENT

ಜಾತ್ರೆಯಲ್ಲಿ ಜಾನುವಾರುಗಳ ಕಲರವ

ಬೆಟ್ಟದಪುರದ ಶಿಡ್ಲುಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ; ರಾಸುಗಳ ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 16:03 IST
Last Updated 10 ಫೆಬ್ರುವರಿ 2019, 16:03 IST
ಬೆಟ್ಟದಪುರದ ಜಾನುವಾರು ಜಾತ್ರೆಯಲ್ಲಿ ಗಮನ ಸೆಳೆಯುತ್ತಿರುವ ಕಲ್ಕಿ ಹಾಗೂ ಬಾದಾಮಿ ಎತ್ತುಗಳು
ಬೆಟ್ಟದಪುರದ ಜಾನುವಾರು ಜಾತ್ರೆಯಲ್ಲಿ ಗಮನ ಸೆಳೆಯುತ್ತಿರುವ ಕಲ್ಕಿ ಹಾಗೂ ಬಾದಾಮಿ ಎತ್ತುಗಳು   

ಬೆಟ್ಟದಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶಿಡ್ಲುಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ಆರಂಭಗೊಂಡಿತು. ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಜಾನುವಾರು ಜಾತ್ರೆಯು ಎಲ್ಲರ ಗಮನ ಸೆಳೆಯುತ್ತಿದೆ.

ಈ ವರ್ಷ ಉತ್ತಮ ಮಳೆಯಾಗಿ ಜಾನುವಾರುಗಳ ಮೇವಿಗೆ ಕೊರತೆ ಇಲ್ಲದಿರುವುದರಿಂದ ರಾಸುಗಳನ್ನು ಕೊಳ್ಳಲು ರೈತರು ಉತ್ಸಾಹ ತೋರುತ್ತಿದ್ದಾರೆ. ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ.

ಶಿಡ್ಲುಮಲ್ಲಿಕಾರ್ಜುನ ಜಾತ್ರೆಯಲ್ಲಿ ಬೆಳ್ಳಿ ಬಸವನಿಗೆ ಹೆಚ್ಚಿನ ಮಹತ್ವ ನೀಡಿದ್ದು, ಈ ಪ್ರಾಂತ್ಯದ ಜನರು ಜಾನುವಾರುಗಳನ್ನು ಪ್ರೀತಿಯಿಂದ ಸಾಕುವ ಮೂಲಕ ಬಸವನಿಗೆ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಾರೆ. ಜಾತ್ರೆಗೆ ತೆರಳುವ ರಾಸುಗಳ ಕುತ್ತಿಗೆ ಹಾಗೂ ಕಾಲುಗಳಿಗೆ ಗೆಜ್ಜೆ ಕಟ್ಟಿ, ಕೊಂಬುಗಳಿಗೆ ಬಣ್ಣ ಬಳಿದು, ದೃಷ್ಟಿ ತಾಕಬಾರದು ಎಂಬ ಉದ್ದೇಶದಿಂದ ಕಪ್ಪು ದಾರವನ್ನು ಮೈಗೆ ಅಡ್ಡಲಾಗಿ ಕಟ್ಟಿ
ನೋಡುಗರ ಗಮನ ಸೆಳೆಯುವಂತೆ ಸಿಂಗರಿಸುತ್ತಾರೆ.

ADVERTISEMENT

ಜಾತ್ರೆಗೆ ರಾಸುಗಳನ್ನು ಕೊಂಡೊಯ್ಯುವಾಗ ವಾದ್ಯ ಮೇಳಗಳು ಮೇಳೈಸುತ್ತವೆ. ಕೆಲವರು ಡಿಜೆ ಸದ್ದಿಗೆ ನೃತ್ಯ ಮಾಡುವ ಮೂಲಕ ರಾಸುಗಳನ್ನು ಜಾತ್ರೆಗೆ ಕರೆತರುತ್ತಾರೆ.

ಎತ್ತುಗಳನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ ಪ್ರತಿಷ್ಠೆಗಾಗಿ ಸಾಕುವ ರೈತರು ಇದ್ದಾರೆ. ರಾಸುಗಳಿಗೆ ಪೌಷ್ಟಿಕ ಆಹಾರಗಳಾದ ರವೆ ಬೂಸಾ, ಬೆಣ್ಣೆ, ಹಾಲು, ಹುರುಳಿ, ಸೊಪ್ಪು, ಜೋಳದ ಕಡ್ಡಿ, ರಾಗಿ ಮತ್ತು ಭತ್ತದ ಹುಲ್ಲನ್ನು ನೀಡಿ ಉತ್ತಮ ಮೈಕಟ್ಟು ಹಾಗೂ ಹೊಳಪು ಬರುವಂತೆ ನಿರ್ವಹಣೆ ಮಾಡುತ್ತಾರೆ ಎಂದು ರೈತ ಸ್ವಾಮಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪಶು ವೈದ್ಯಾಧಿಕಾರಿ ಸಂದೇಶ್, ಪಶು ಪರೀಕ್ಷಕರಾದ ಸಿದ್ದರಾಜು, ನಾಗರಾಜು, ನಾರಾಯಣ, ಮಂಜುನಾಥ್ ಜಾತ್ರೆಯಲ್ಲಿಯೇ ಬಿಡಾರ ಹೂಡಿದ್ದಾರೆ. ಪ್ರತಿದಿನವೂ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಅಜೀರ್ಣ, ಭೇದಿ ಮತ್ತು ಜ್ವರಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ.

ತಾಲ್ಲೂಕು ಆಡಳಿತವು ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆ ನಡೆಯುವ ಪ್ರದೇಶದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ
ಎಂದು ಉಪತಹಶೀಲ್ದಾರ್ ಶಶಿಧರ್ ತಿಳಿಸಿದರು.

ಕಳೆದ ವರ್ಷ ಪ್ರಚಾರದ ಕೊರತೆ ಕಾಡಿತ್ತು. ಆದರೆ, ಈ ಬಾರಿ ಉತ್ತಮ ಪ್ರಚಾರ ಮಾಡಿದ್ದು, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಜಾನುವಾರುಗಳನ್ನು ಕರೆತರಲಾಗಿದೆ.

ಶಿಡ್ಲುಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಫೆ.20 ರಂದು ನಡೆಯಲಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

₹3.60 ಲಕ್ಷ ಮೌಲ್ಯದ ಎತ್ತುಗಳು:

ಜಾನುವಾರು ಜಾತ್ರೆಯಲ್ಲಿ ಮಂಟಿಬಿಳಗುಲಿ ಗ್ರಾಮದ ಸ್ವಾಮೀಗೌಡ ಅವರ ₹3.60 ಲಕ್ಷ ಮೌಲ್ಯದ ಕಲ್ಕಿ ಹಾಗೂ ಬಾದಾಮಿ ಹೆಸರಿನ 6 ಹಲ್ಲಿನ ಎತ್ತುಗಳು ಗಮನ ಸೆಳೆಯುತ್ತಿವೆ.

ಬೆಟ್ಟದಪುರದ ರೈತರಾದ ನೀಲಯ್ಯ ಹಾಗೂ ಚಂದ್ರ ಅವರ 4 ಹಲ್ಲಿನ ಜೋಡೆತ್ತಿಗೆ ₹2 ಲಕ್ಷ, ಸಾಲುಕೊಪ್ಪಲು ಕೆಂಚೇಗೌಡ ಅವರ ರಾಸುಗಳಿಗೆ ₹1.5 ಲಕ್ಷ ಮೌಲ್ಯವಿದೆ. ಪ್ರತಿದಿನ 250ರಿಂದ 300 ಜೋಡೆತ್ತುಗಳು ಮಾರಾಟವಾಗುತ್ತಿವೆ. ಪ್ರತಿ ಜೋಡೆತ್ತಿಗೆ ಕನಿಷ್ಠ ₹85,000 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.