ADVERTISEMENT

ಸಿದ್ಧಲಿಂಗಪುರ: ಷಷ್ಠಿ ಸಡಗರದಲ್ಲಿ ಮಿಂದೆದ್ದ ಭಕ್ತರ

ಷಷ್ಠಿಯ ಪ್ರಯುಕ್ತ ಸಿದ್ಧಲಿಂಗಪುರದಲ್ಲಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 10:25 IST
Last Updated 3 ಡಿಸೆಂಬರ್ 2019, 10:25 IST
ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರದ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಸೋಮವಾರ ಷಷ್ಠಿ ಪ್ರಯುಕ್ತ ಅರ್ಚಕರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.
ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರದ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಸೋಮವಾರ ಷಷ್ಠಿ ಪ್ರಯುಕ್ತ ಅರ್ಚಕರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.   

ಮೈಸೂರು: ಬೆಳಕು ಹರಿಯುವುದಕ್ಕೂ ಮುನ್ನವೇ ಮಂಜು ಕವಿದ ಮಬ್ಬಿನಲ್ಲಿ ಸಾಲುಗಟ್ಟಿ ಜನರು ನಿಂತಿದ್ದರು. ಬೀಸುತ್ತಿದ್ದ ಕುಳಿರ್ಗಾಳಿಗೆ ಮಡಿಯುಟ್ಟು ಗಡಗಡನೇ ನಡುಗುತ್ತಾ ದೇವರ ನಾಮ ಜಪಿಸುತ್ತಿದ್ದರು. ಮಂದಗತಿಯಲ್ಲಿಯೇ ಸಾಗಿ ಹುತ್ತ ಹಾಗೂ ನಾಗರಕಲ್ಲುಗಳಿಗೆ ಹಾಲೆರೆದು ಭಕ್ತ ಜನ ಕೈಮುಗಿದರು.

ಈ ಎಲ್ಲ ದೃಶ್ಯಕ್ಕೂ ತಾಲ್ಲೂಕಿನ ಸಿದ್ಧಲಿಂಗಪುರದ ಸುಮಾರು 300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲ ಸೋಮವಾರ ಸಾಕ್ಷಿಯಾಯಿತು. ಷಷ್ಠಿ ಅಂಗವಾಗಿ ಸಾವಿರಾರು ಮಂದಿ ಭಕ್ತರು ದೇಗುಲದಲ್ಲಿ ಸರತಿಸಾಲಿನಲ್ಲಿ ನಿಂತು ದರ್ಶನ ಪಡೆದರು.

ನಸುಕಿನ 1 ಗಂಟೆಯಿಂದಲೇ ಪೂಜಾವಿಧಿಗಳು ಆರಂಭಗೊಂಡವು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಾಣಿಕೆ ನೀಡಿದ್ದರು ಎನ್ನಲಾದ ‘ಬೆಳ್ಳಿಯ ನಾಗಾಭರಣ’ದಿಂದ ಕಂಗೊಳಿಸುತ್ತಿದ್ದ ದೇವರ ವಿಗ್ರಹವನ್ನು ಭಕ್ತರು ಕಣ್ತುಂಬಿಕೊಂಡರು. ನಂತರ, ಸುಬ್ರಹ್ಮಣ್ಯಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು.

ADVERTISEMENT

ಮೈಸೂರು– ಬೆಂಗಳೂರು ರಸ್ತೆ ಸಂಚಾರವನ್ನು ಇಲ್ಲಿ ಬಂದ್ ಮಾಡಲಾಗಿತ್ತು. ರಸ್ತೆಗೆ ಜಾತ್ರೆಯ ರಂಗು ತುಂಬಿತ್ತು. ಒದ್ದೆಬಟ್ಟೆಯುಟ್ಟ ಹಲವು ಮಂದಿ ಹುತ್ತಕ್ಕೆ ಹಾಗೂ ನಾಗರಕಲ್ಲುಗಳಿಗೆ ಹಾಲೆರೆದರು. ಬೆಣ್ಣೆ, ನಾಗರ, ಬಾಳೆಹಣ್ಣು, ಎಲೆ, ಅಡಿಕೆ, ಹೂ ಅಗರಬತ್ತಿ, ಕರ್ಪೂರ ಸೇರಿದಂತೆ ವಿವಿಧ ಬಗೆಯ ಪೂಜಾಸಾಮಗ್ರಿಗಳನ್ನು ಅರ್ಪಿಸಿದರು.

ಹಲವು ಮಂದಿ ಅಲ್ಲಲ್ಲಿ ಪ್ರಸಾದ ಹಂಚಿದರು. ಸುತ್ತಮುತ್ತಲ ಗ್ರಾಮಗಳಲ್ಲಿ ಹಾಗೂ ನಗರದ ಕೆಲವು ಶಾಲೆಗಳಲ್ಲಿ ರಜೆ ನೀಡಿದ್ದರಿಂದ ಮಕ್ಕಳೂ ಇದರಲ್ಲಿ ಭಾಗಿಯಾದರು.

ಜಾತ್ರೆಗೆ ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಜನರು ಬಂದಿದ್ದರು. ಪೂಜೆಗೆ ಬೇಕಾದ ಪರಿಕರಗಳ ಜತೆಗೆ ಗೃಹೋಪಯೋಗಿ ಸರಕುಗಳ ಒಡ್ಡೋಲಗವೇ ಇಲ್ಲಿ ನೆರೆದಿತ್ತು.

ಮೈಸೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದಿಂದ ವಿಶೇಷ ಬಸ್ ಸಂಚಾರ ಸೌಲಭ್ಯ ಒದಗಿಸಲಾಗಿತ್ತು. ಟೆಂಪೊಗಳಲ್ಲಿ, ಸರಕು ಸಾಗಣೆ ಆಟೊಗಳಲ್ಲಿಯೂ ಜನರು ಇಲ್ಲಿಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.