ADVERTISEMENT

ರಾಜೇಂದ್ರ ಶ್ರೀ ಕೊಡುಗೆ ಅಪಾರ

ಜಯಂತಿ ಮಹೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 11:42 IST
Last Updated 18 ಆಗಸ್ಟ್ 2022, 11:42 IST
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರು/ ಪ್ರಜಾವಾಣಿ ಚಿತ್ರ
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರು/ ಪ್ರಜಾವಾಣಿ ಚಿತ್ರ   

ಮೈಸೂರು: ‘ಸಮಾಜದ ಉನ್ನತಿಗೆ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ರಾಜೇಂದ್ರ ಶ್ರೀಗಳು ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸ್ಮರಿಸಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಗುರುವಾರ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 107ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಬಡತನ ಹಾಗೂ ಅಸಮಾನತೆ ನಿರ್ಮೂಲನೆಗೆ ಶ್ರೀಗಳು ಶ್ರಮಿಸಿದ್ದರು. ಅದನ್ನು ಮುಂದುವರಿಸುತ್ತಿರುವ ಸುತ್ತೂರು ಮಠವು ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಕ್ಷೇತ್ರದ ಸಂರಕ್ಷಣೆಗೂ ಶ್ರಮಿಸುತ್ತಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸುತ್ತೂರು ಶ್ರೀಮಠ ದೇಶದ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಿದ ಮಹಾನ್‌ ಋಷಿ. ನೂರಾರು ಶಾಲಾ–ಕಾಲೇಜುಗಳು, ವಿದ್ಯಾರ್ಥಿನಿಲಯಗಳನ್ನು ತೆರೆದು ಶಿಕ್ಷಣ ದಾಸೋಹದಲ್ಲಿ ಕ್ರಾಂತಿಯನ್ನೇ ಮಾಡಿದರು’ ಎಂದು ಹೇಳಿದರು.

ತ್ರಿವಿಧ ದಾಸೋಹದಿಂದ:

‘ಮೌಲ್ಯಾಧಾರಿತ ಶಿಕ್ಷಣ ನೀಡುವತ್ತ ಗಮನಹರಿಸಿದ ಶ್ರೀಗಳು, ಅಕ್ಷರ, ಅನ್ನ ಹಾಗೂ ಆರೋಗ್ಯ ದಾಸೋಹ ಮಾಡಿದರು. ಆ ಗುರು ಪರಂಪರೆಯ ಹಾದಿಯಲ್ಲಿ ಸಾಗುತ್ತಿರುವ ಶ್ರೀಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೂಡ ದೂರದರ್ಶಿತ್ವ ಮತ್ತು ಸದ್ಭಾವನೆಗಳ ಮೂಲಕ ಸೇವಾ ಕಾರ್ಯಗಳಲ್ಲಿ ತೊಡಗಿಸಿದ್ದಾರೆ. ದೇಶದೊಂದಿಗೆ ವಿದೇಶದಲ್ಲೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠ ಹೆಮ್ಮರವಾಗಿ ಬೆಳೆದಿದೆ’ ಎಂದರು.

‘ಭಾರತೀಯ ಸಂಸ್ಕೃತಿ ಅನಂತವಾದುದು. ಇದನ್ನು ಅನಾದಿ ಕಾಲದಿಂದಲೂ ಸಾಧು–ಸಂತರು ರೂಪಿಸಿಕೊಂಡು ಬಂದಿದ್ದಾರೆ. ಉಳಿಸಲು ಶ್ರಮಿಸುತ್ತಿದ್ದಾರೆ. ವಿಶ್ವ ಬಂಧುತ್ವ ಮತ್ತು ವಿಶ್ವಶಾಂತಿ ಸಾರುವ ಸಂಸ್ಕೃತಿ ನಮ್ಮದು’ ಎಂದು ತಿಳಿಸಿದರು.

ತ್ಯಾಗಮಯಿ:

ಸಾನ್ನಿಧ್ಯ ವಹಿಸಿದ್ದ ತುಮಕೂರಿನ ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ, ‘ರಾಜೇಂದ್ರ ಶ್ರೀ ಮಹಾನ್‌ ತ್ಯಾಗಮಯಿ. ತ್ಯಾಗದಿಂದಲೇ ಅಮೃತತ್ವವನ್ನು ಸಾಧಿಸಿದವರು. ಹೊಸ ಇತಿಹಾಸ ಬರೆದವರು. ಶ್ರೀಮಠವು ಹಿಮಾಲಯದ ಎತ್ತರಕ್ಕೆ ಬೆಳೆಯಲು ಭದ್ರ ಬುನಾದಿ ಹಾಕಿದವರು. ಲಿಂಗ ಪೂಜೆಗಿಂತ ಜಂಗಮ ಸೇವೆಯೇ ಶ್ರೇಷ್ಠ ಎಂದು ನಂಬಿದ್ದರು. ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡಿದರು. ಮಕ್ಕಳ ಶಿಕ್ಷಣಕ್ಕಾಗಿ ಜೀವನ ಮುಡುಪಾಗಿಟ್ಟರು’ ಎಂದು ನೆನೆದರು.

ಮಾತೃ ವಾತ್ಸಲ್ಯದ ಮತ್ತೊಂದು ಮುಖ:

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ರಾಜೇಂದ್ರ ಶ್ರೀ ಮಾತೃ ವಾತ್ಸಲ್ಯದ ಮತ್ತೊಂದು ರೂಪವಾಗಿದ್ದರು. ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ಮಠದ ಗುರುಗಳಾಗಿ ಪರಂಪರೆ ಮತ್ತು ಆಧುನಿಕತೆಗಳನ್ನು ಸಮನ್ವಯಗೊಳಿಸಿ ಸೇವಾ ಕಾರ್ಯದಲ್ಲಿ ತೊಡಗಿ ಕಾರ್ಯವ್ಯಾಪ್ತಿಯಲ್ಲಿ ವಿಸ್ತಾರಗೊಳಿಸಿದರು’ ಎಂದು ಸ್ಮರಿಸಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದರು’ ಎಂದು ತಿಳಿಸಿದರು.

‘ರಷ್ಯಾ–ಉಕ್ರೇನ್‌ ನಡುವೆ ಯುದ್ಧ ಮುಂದುವರಿದಿದೆ. ಇನ್ನೂ ಕೆಲವು ರಾಷ್ಟ್ರಗಳು ಯುದ್ಧಕ್ಕೆ ಸಜ್ಜಾಗುತ್ತಿವೆ. ಈ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸಲೆಂದು ನಾವೆಲ್ಲರೂ ಪ್ರಾರ್ಥಿಸಬೇಕು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂದೇಶ ವಾಚಿಸಿದರು. ಮೇಯರ್‌ ಸುನಂದಾ ಫಾಲನೇತ್ರ ಉಪಸ್ಥಿತರಿದ್ದರು.

ಜೆಎಸ್‌ಎಸ್‌ ಲಲಿತಕಲಾ ವೃಂದದ ರೂಪಾ ರವೀಶ್‌, ರೂಪಾ ಗುರುಪ್ರಸಾದ್‌, ವಿನುತಾ ಕಾಂತರಾಜು ಮತ್ತು ತಂಡದವರು ಪ್ರಾರ್ಥಿಸಿದರು. ಡಾ.ನಂದೀಶ್‌ ಹಂಚೆ ಸ್ವಾಗತಿಸಿದರು. ಪ್ರೊ.ಕೆ.ಎಸ್.ಸುರೇಶ್‌ ನಿರೂಪಿಸಿದರು. ಬಿ.ನಿರಂಜನಮೂರ್ತಿ ವಂದಿಸಿದರು.

ಸ್ಮರಣೀಯ ಸೇವೆ

ಸಮಾಜಕ್ಕೆ ಸುತ್ತೂರು ಮತ್ತು ಸಿದ್ಧಗಂಗಾ ಮಠ ಸ್ಮರಣೀಯ ಸೇವೆಯನ್ನು ಸಲ್ಲಿಸಿವೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ.

–ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ, ತುಮಕೂರು

ಅಜ್ಞಾನ ಹೋಗಲಾಡಿಸಲು

ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ರಾಜೇಂದ್ರ ಶ್ರೀ, ಸಮಾಜದಲ್ಲಿನ ಅಜ್ಞಾನ ಹೋಗಲಾಡಿಸಲು ಅಹರ್ನಿಶಿ ಶ್ರಮಿಸಿದರು.

–ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.