ADVERTISEMENT

ಸಂಸ್ಕೃತಕ್ಕೆ ಸಿಕ್ಕ ಗೌರವ: ಸಂಪತ್

ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:34 IST
Last Updated 22 ಜುಲೈ 2019, 19:34 IST
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ‘ಸುಧರ್ಮಾ’ ಸಂಸ್ಕೃತ ದಿನ ಪತ್ರಿಕೆ ಸಂಪಾದಕ ಸಂಪತ್‌ಕುಮಾರ್ ಅವರಿಗೆ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ‘ಸುಧರ್ಮಾ’ ಸಂಸ್ಕೃತ ದಿನ ಪತ್ರಿಕೆ ಸಂಪಾದಕ ಸಂಪತ್‌ಕುಮಾರ್ ಅವರಿಗೆ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಮೈಸೂರು: ‘ಸಂಸ್ಕೃತವನ್ನು ಹೆಚ್ಚು ಅಂಕ ಗಳಿಸುವ ವಿಷಯ ಎಂದು ವಿದ್ಯಾರ್ಥಿಗಳು ಅಭ್ಯಸಿಸುವ ಬದಲು ಭಾಷೆಯಾಗಿ ಅಧ್ಯಯನ ಮಾಡಬೇಕು’ ಎಂದು ‘ಸುಧರ್ಮಾ’ ಸಂಸ್ಕೃತ ದಿನ ಪತ್ರಿಕೆ ಸಂಪಾದಕ ಸಂಪತ್‌ಕುಮಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಈ ಪ್ರಶಸ್ತಿ ನನಗೆ ಸಂದಿದ್ದಲ್ಲ. ಸಂಸ್ಕೃತಕ್ಕೆ ಸಿಕ್ಕ ಗೌರವ’ ಎಂದು ಹೇಳಿದರು.

‘ನಮ್ಮ ತಂದೆ ಆರಂಭಿಸಿದ್ದ ಈ ಪತ್ರಿಕೆ 50 ವರ್ಷದಿಂದ ಮುದ್ರಣಗೊಳ್ಳುತ್ತಿದೆ ಎಂದರೇ ಆಶ್ಚರ್ಯ ಎನಿಸುತ್ತಿದೆ. ವಿದೇಶಿಗರು ಇಲ್ಲಿಗೆ ಬಂದು ಸಂಸ್ಕೃತ ಕಲಿತು, ತಮ್ಮ ದೇಶದಲ್ಲಿ ಪ್ರಚಾರ ಮಾಡುತ್ತಿರುವಾಗ, ನಮ್ಮವರು ಹೆಚ್ಚು ಒಲವು ತೋರುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಜೆಎಸ್‌ಎಸ್‌ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಪಿ.ಮಂಜುನಾಥ್‌ ‘ಟಿ.ವಿ, ಮೊಬೈಲ್‌ಗಳ ಕಾಲಘಟ್ಟದಲ್ಲಿ ಸಂಸ್ಕೃತ ಪತ್ರಿಕೆಯೊಂದು 50 ವರ್ಷ ಪೂರೈಸಿರುವುದು ಅದ್ಭುತ’ ಎಂದರು.‌‌

ಭಾರತೀಯ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಎಸ್‌.ರಂಗಪ್ಪ ಮಾತನಾಡಿ ‘ನವ ಮಾಧ್ಯಮಗಳ ಅಬ್ಬರದಲ್ಲೂ ಪತ್ರಿಕೆಗಳು ತಮ್ಮದೇ ಆದ ವಿಶ್ವಾಸರ್ಹತೆ ಉಳಿಸಿಕೊಂಡು ಬಂದಿವೆ’ ಎಂದು ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‌ ಬಾಬು ಉಪಸ್ಥಿತರಿದ್ದರು.

ಜೈಶಂಕರ ಬದನಗುಪ್ಪ ಸ್ವಾಗತಿಸಿದರು. ಸುಬ್ರಮಣ್ಯ ನಿರೂಪಿಸಿದರು. ಬಿ.ರಾಘವೇಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.