ADVERTISEMENT

ಶೂಟ್‌ಔಟ್ ಮಾಡಿದ ಇನ್‌ಸ್ಪೆಕ್ಟರ್ ವರ್ಗಾವಣೆ

ಪಂಜಾಬ್‌ನಿಂದ ಮೈಸೂರಿಗೆ ಬಂದ ಆರೋಪಿ ಸಂಬಂಧಿಕರು

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:21 IST
Last Updated 18 ಮೇ 2019, 20:21 IST
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಆರೋಪಿ ಸುಖವಿಂದರ್‌ಸಿಂಗ್ ಅವರ ಮರಣೋತ್ತರ ಪರೀಕ್ಷೆ ಶನಿವಾರ ನಡೆಯಿತು. ನಂತರ ಮೃತದೇಹವನ್ನು ಸಂಬಂಧಿಕರು ಅಂಬುಲೆನ್ಸ್‌ನಲ್ಲಿ ಸಾಗಿಸಿದರು.
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಆರೋಪಿ ಸುಖವಿಂದರ್‌ಸಿಂಗ್ ಅವರ ಮರಣೋತ್ತರ ಪರೀಕ್ಷೆ ಶನಿವಾರ ನಡೆಯಿತು. ನಂತರ ಮೃತದೇಹವನ್ನು ಸಂಬಂಧಿಕರು ಅಂಬುಲೆನ್ಸ್‌ನಲ್ಲಿ ಸಾಗಿಸಿದರು.   

ಮೈಸೂರು: ರದ್ದಾದ ನೋಟು ಬದಲಾವಣೆ ದಂಧೆ ನಡೆಸುತ್ತಿತ್ತು ಎನ್ನಲಾದ ಗುಂಪೊಂದರ ಮೇಲೆ ಗುರುವಾರ ಗುಂಡಿನ ದಾಳಿ ನಡೆಸಿದ್ದ ಇಲ್ಲಿನ ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಪೊಲೀಸ್ ಕೇಂದ್ರ ಕಚೇರಿಗೆ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಶನಿವಾರ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿವೈಎಸ್‌ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತನಿಖಾ ದಳ ನಗರಕ್ಕೆ ಬಂದಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದೆ.

ADVERTISEMENT

ಮರಣೋತ್ತರ ಪರೀಕ್ಷೆ: ಗುಂಡಿನ ದಾಳಿಯಲ್ಲಿ ಮೃತಪಟ್ಟ ಆರೋಪಿ ಸುಖವಿಂದರ್‌ ಸಿಂಗ್ ಮರಣೋತ್ತರ ಪರೀಕ್ಷೆ ಶನಿವಾರ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು.

ಪಂಜಾಬ್‌ನಿಂದ ಬಂದ ಸುಖವಿಂದರ್ ಸಂಬಂಧಿಕರಾದ ಮುಕ್ಸಾರ್‌ಸಾಹಿಬ್‌ ಜಿಲ್ಲೆಯ ಬುರಾಗುಜ್ಜರ್ ಗ್ರಾಮದ ಗುರುಮೀತ್‌ ಸಿಂಗ್, ಹರಜಿಂದರ್‌ ಸಿಂಗ್ ಹಾಗೂ ಆರ್ವಿಂದರ್‌ ಪಾಲ್‌ ಸಿಂಗ್ ಅವರಿಂದ 5ನೇ ಹೆಚ್ಚುವರಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಭೀಮಪ್ಪ ಎಸ್.ಪಾಲ್ ಹೇಳಿಕೆಗಳನ್ನು ಪಡೆದುಕೊಂಡರು.

ಮರಣೋತ್ತರ ಪರೀಕ್ಷಾ ಕೇಂದ್ರದ ಆವರಣದೊಳಗೆ ಮಾಧ್ಯಮದವರ ಪ್ರವೇಶ ನಿರಾಕರಿಸಲಾಗಿತ್ತು. ಮೂವರು ತಜ್ಞ ವೈದ್ಯರು ಹೆಚ್ಚುವರಿ ತಹಶೀಲ್ದಾರ್ ಚಂದ್ರಕಾಂತ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.

ಕುಟುಂಬದವರ ಸಂಪರ್ಕದಲ್ಲಿರಲಿಲ್ಲ!

‘ಗುಂಡೇಟು ತಗುಲಿ ಮೃತಪಟ್ಟ ಆರೋಪಿ ಸುಖವಿಂದರ್‌ ಸುಮಾರು ಹತ್ತು ವರ್ಷಗಳಿಂದ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಕುಟುಂಬದವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‌‘ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಆರೋಪಿಯು ಅವಿವಾಹಿತನಾಗಿದ್ದ. ಈತನ ಸೋದರಿಯು ವೈದ್ಯೆಯಾಗಿದ್ದಾರೆ. ಈತನ ಜೇಬಿನಲ್ಲಿ ದೆಹಲಿ ಮೂಲದ ಕಂಪನಿಯೊಂದರಲ್ಲಿ ಹಣಕಾಸು ಸಲಹೆಗಾರನಾಗಿದ್ದ ಕುರಿತ ಗುರುತಿನ ಪತ್ರ ದೊರೆತಿತ್ತು. ಇದರ ಆಧಾರದ ಮೇಲೆ ನಗರ ಪೊಲೀಸರು ಪಂಜಾಬ್‌ನ ಫರೀದಕೋಟ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನೆರವು ಕೋರಿದರು. ಇವರೇ ಸಂಬಂಧಿಕರನ್ನು ಹುಡುಕಿ ಮೈಸೂರಿಗೆ ಕಳುಹಿಸಿದರು’ ಎಂದು ಹೇಳಿದರು.

ಆದರೆ, ಮೈಸೂರಿಗೆ ಬಂದ ಸಂಬಂಧಿಕರು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಿಲ್ಲ. ಮಾಧ್ಯಮದವರೊಡನೆ ಮಾತನಾಡಲು ನಿರಾಕರಿಸಿದರು. ಕೇವಲ ತನಿಖಾಧಿಕಾರಿ ಸಿಸಿಬಿ ಎಸಿಪಿ ಮರಿಯಪ್ಪ ಅವರನ್ನು ಸಂಪರ್ಕಿಸಿದರು. ಮರಣೋತ್ತರ ಪರೀಕ್ಷೆ ಬಳಿಕ, ಸುಖವಿಂದರ್‌ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.