ADVERTISEMENT

ಸಿಎಂ ನಿವೇಶನ ಹಿಂತಿರುಗಿಸಿ, ತನಿಖೆ ನಡೆಸಬೇಕಿತ್ತು: ಪ್ರತಾಪ ಸಿಂಹ ಆರೋಪ

ಬಿಜೆಪಿ ಆಡಳಿತದಲ್ಲೂ ಮಣ್ಣು ತಿನ್ನುವ ಕೆಲಸವಾಗಿದೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:53 IST
Last Updated 22 ಜುಲೈ 2024, 14:53 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಮುಡಾದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ₹ 3ಸಾವಿರದಿಂದ ₹ 4ಸಾವಿರ ಕೋಟಿಯದ್ದಾಗಿದ್ದು, ಇದನ್ನು ತನಿಖೆ ಮಾಡಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯುವ ಮನಃಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಹಗರಣದಲ್ಲಿರುವ ದೊಡ್ಡ ದೊಡ್ಡ ಭ್ರಷ್ಟಾಚಾರಿಗಳು ಹಾಗೂ ನಿವೇಶನವನ್ನು ಮಾರಿದವರಾರೂ ಸಿಕ್ಕಿ ಬೀಳುವುದಿಲ್ಲ’ ಎಂದು ದೂರಿದರು.

‘ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರಿ ಎನ್ನುವುದಿಲ್ಲ. ಅದರೆ, 14 ನಿವೇಶನಗಳನ್ನು ಪಡೆದುಕೊಂಡ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಬೇಸರ ತರಿಸಿದೆ. ಅವರು ಭ್ರಷ್ಟಾಚಾರದ ಕಳಂಕ ಹೊತ್ತಿದ್ದನ್ನು ನಾನು ನೋಡಿಲ್ಲ. ಈ ನಿವೇಶನದ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ’ ಎಂದು ಹೇಳಿದರು.

ADVERTISEMENT

‘ಅವರದ್ದು ತಪ್ಪೇ ಇಲ್ಲವೆಂದೇ ಭಾವಿಸೋಣ. ಆರೋಪ ಬಂದಾಗ ನಿವೇಶನಗಳನ್ನು ಒಪ್ಪಿಸಿ ತನಿಖೆ ಮಾಡಿಸಬೇಕಿತ್ತು. ಅದನ್ನ ಬಿಟ್ಟು ₹ 62 ಕೋಟಿ ಪರಿಹಾರ ಕೇಳುತ್ತಾರಲ್ಲ? ಹಗರಣಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ತನಿಖೆಯಿಂದ ಯಾರಿಗೂ ಏನೂ ಅಗುವುದಿಲ್ಲ. ಎಲ್ಲರೂ ಸೇಫ್ ಆಗಿರುತ್ತಾರೆ’ ಎಂದರು.

‘2019ರಲ್ಲಿ ವಿ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 7,500 ಸಾವಿರ ಖಾಲಿ ನಿವೇಶನಗಳ ಹಾರಾಜಿಗೆ ಮುಂದಾದರು. ಅಷ್ಟರಲ್ಲಿ ಅವರಿಗೆ ಗೇಟ್ ಪಾಸ್ ಸಿಕ್ಕಿತ್ತು. ಆಯುಕ್ತ ಕಾಂತರಾಜ್‌ಗೂ ಗೇಟ್ ಪಾಸ್ ಕೊಡಲಾಯಿತು. ಇದು ಮುಡಾದ ವ್ಯವಸ್ಥೆ. ಕಳೆದ ನಾಲ್ಕು ವರ್ಷಗಳಿಂದ ಈ ಹಗರಣ ನಡೆದಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ನಿವೇಶನಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸುತ್ತಾರೆ ಎಂದು ನಂಬಿದ್ದೆ. ಆದರೆ, ಹಾಗಾಗಲಿಲ್ಲ. ಇದು ನನಗೆ ಅವರ ಮೇಲಿದ್ದ ಅಭಿಮಾನ ಕಡಿಮೆಯಾಗಿದೆ. ಅವರಿಗೆ ದುಡ್ಡಿನ ಹಪಾಹಪಿ ಇಲ್ಲ ಎಂಬುದನ್ನು ನಾನು ಬೇರೆ ಪಕ್ಷದಲ್ಲಿದ್ದರೂ ಹೇಳಬಲ್ಲೆ. ಆದರೆ, ಈ ಪ್ರಕರಣದಲ್ಲಿ ದುಡ್ಡಿನ ವಿಚಾರವನ್ನು ಅವರು ಮಾತನಾಡಿದ್ದರಿಂದ ಬೇಸರವಾಗಿದೆ. ಬಿಜೆಪಿ ಆಡಳಿತದಲ್ಲೂ ಮುಡಾದಲ್ಲಿ ಮಣ್ಣು ತಿನ್ನುವ ಕೆಲಸವಾಗಿದೆ. ಅದೆಲ್ಲವನ್ನೂ ಸೇರಿಸಿ ತನಿಖೆ ಮಾಡಿಸಬೇಕಿತ್ತು. ಆದರೆ, ಈಗ ಏನಾಗಿದೆ ನೋಡಿ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.