ADVERTISEMENT

‘ಸಿದ್ದರಾಮಯ್ಯ ಆಡಳಿತ: ನೀತಿ-ನಿರ್ಧಾರ’ ಪುಸ್ತಕ ಬಿಡುಗಡೆ ಜುಲೈ 23ರಂದು

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 13:43 IST
Last Updated 21 ಜುಲೈ 2022, 13:43 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಬೆಂಗಳೂರಿನ ಜನ ಮನ ಪ್ರತಿಷ್ಠಾನ ಹೊರತಂದಿರುವ ‘ಸಿದ್ದರಾಮಯ್ಯ ಆಡಳಿತ, ನೀತಿ, ನಿರ್ಧಾರ’ ಪುಸ್ತಕ ಬಿಡುಗಡೆ ಮತ್ತು ಸಂವಾದ ಗೋಷ್ಠಿಯನ್ನು ಜುಲೈ 23ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ತಿಳಿಸಿದರು.

‘ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಕಾಗಿನೆಲೆ ಕನಕ ಗುರು ಪೀಠದ ಶಿವಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಕುಲಪತಿ ಡಾ.ಸಬೀಹಾ ಭೂಮಿಗೌಡ ಪುಸ್ತಕ ಕುರಿತು ಮಾತನಾಡಲಿದ್ದಾರೆ. ವಿಧಾನಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.

‘ಸಾಂಸ್ಕೃತಿಕ ಸಂವೇದನೆ ಮತ್ತು ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ನಡೆದಿರುವ ಪ್ರಯತ್ನಗಳನ್ನು ಸಾಹಿತ್ಯಿಕವಾಗಿ ದಾಖಲಿಸುವ ಉದ್ದೇಶದಿಂದ ಈ ಪುಸ್ತಕ ಹೊರತರಲಾಗಿದೆ. ಸಿದ್ದರಾಮಯ್ಯ ನೀಡಿದ್ದ ಜನೋಪಯೋಗಿ ಯೋಜನೆಗಳ ಮೇಲೆ ಬೆಳಕು ಚೆಲ್ಲಲಿದೆ’ ಎಂದು ತಿಳಿಸಿದರು.

ADVERTISEMENT

‘ತಾತ್ವಿಕ ವಿವೇಚನೆಯ ಕೃತಿ ಇದಾಗಿದೆ. ನಾಡಿನ 27 ಮಂದಿ ಲೇಖಕರು ಲೇಖನ ಒದಗಿಸಿದ್ದು, 448 ಪುಟಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

‘ಅಂದು ಮಧ್ಯಾಹ್ನ 3.30ಕ್ಕೆ ‘ಸಮಕಾಲೀನ ಸಂವೇದನೆ’–ಸಂವಾದ ಕಾರ್ಯಕ್ರಮ ನಡೆಯಲಿದೆ. ಪುಸ್ತಕದ ಲೇಖಕರ ಜೊತೆ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಸಂವಾದ ನಡೆಸಿಕೊಡಲಿದ್ದಾರೆ. ಎ.ನಾರಾಯಣ, ಡಾ.ಹಿ.ಶಿ.ರಾಮಚಂದ್ರೇಗೌಡ, ಪ್ರೊ.ಪುರುಷೋತ್ತಮ ಬಿಳಿಮಲೆ, ನಟರಾಜ್ ಹುಳಿಯಾರ್, ಡಾ.ಅರವಿಂದ ಮಾಲಗತ್ತಿ, ಎಸ್.ನಟರಾಜ ಬೂದಾಳು, ಮೇಟಿ ಮಲ್ಲಿಕಾರ್ಜುನ, ಎಸ್.ಜಾಫೆಟ್, ಪದ್ಮರಾಜ ದಂಡಾವತಿ, ಜಯಪ್ರಕಾಶ್ ಶೆಟ್ಟಿ, ಬಿ.ಎಲ್.ರಾಜು, ಎಂ.ಸಿದ್ದರಾಜು, ನೈಮೂರ್ ರಹಮಾನ್, ಡಿ.ಪುರುಷೋತ್ತಮ, ಕೆ.ಷರೀಫಾ, ಬಿ.ಕೆ.ರವಿ, ನಿಕೇತ್‌ರಾಜ್ ಮೌರ್ಯ, ಜಿ.ಕೆ.ಸತೀಶ್, ರಂಗನಾಥ ಕಂಟನಕುಂಟೆ, ರವಿಕುಮಾರ್ ಬಾಗಿ, ಡಿ.ಆರ್.ದೇವರಾಜ್, ಪ್ರಕಾಶ ಮಂಟೇದ, ಎಂ.ಎಸ್.ಮಣಿ, ಎಂ.ರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಳ್ಳುವ 72 ಮಂದಿ ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ’ ಎಂದರು.

ಪ್ರತಿಷ್ಠಾನದ ಸದಸ್ಯ ಕಾ.ತ. ಚಿಕ್ಕಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.