ಮೈಸೂರಿನಲ್ಲಿ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಸೋಮವಾರ ಚಿಕ್ಕಗಡಿಯಾರ ಬಳಿ ನಡೆದ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಮೆ ಬಾಂಡ್ ವಿತರಿಸಲಾಯಿತು
ಪ್ರಜಾವಾಣಿ ಚಿತ್ರ
ಮೈಸೂರು: ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 78ನೇ ಜನ್ಮದಿನದ ಅಂಗವಾಗಿ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಮಾ ಬಾಂಡ್ ವಿತರಿಸಲಾಯಿತು.
ಇಲ್ಲಿನ ಚಿಕ್ಕಗಡಿಯಾರ ಬಳಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ, 2ನೇ ಹಂತದಲ್ಲಿ 50 ಮಂದಿಗೆ ಬಾಂಡ್ ವಿತರಣೆ ಮಾಡಲಾಯಿತು.
ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ‘ರಾಜಕೀಯ ಪಕ್ಷಗಳ ನಾಯಕರು ಬೀದಿಗೆ ಬಂದು ಜನರೊಂದಿಗೆ ಬೆರೆಯಬೇಕು. ಆಗ ಮಾತ್ರ ಜನಸಾಮಾನ್ಯರ ಕಷ್ಟ–ಸುಖ ಅರಿವಿಗೆ ಬರುತ್ತದೆ’ ಎಂದರು.
‘ದೇವರಾಜ ಅರಸು ರಾಜಕೀಯದಲ್ಲಿ ಮಾಸ್ ಲೀಡರ್ ಆಗಲು ಸಾಧ್ಯವಾಗಲಿಲ್ಲ. ಇಂದಿರಾ ಗಾಂಧಿ ಸಾರ್ವಕಾಲಿಕ ಮಾಸ್ ಲೀಡರ್. ಅದೇ ರೀತಿಯ ಇಮೇಜ್ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅವರು ಹೀಗೆ ಬೆಳೆದಿರುವುದು ಶ್ರಮದಿಂದಲೇ ಹೊರತು ಕುಟುಂಬದ ಹಿನ್ನೆಲೆಯಿಂದಲ್ಲ’ ಎಂದು ಹೇಳಿದರು.
ಅಚ್ಚರಿ: ‘ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಅವರು ನೀಡಿದ 16 ಬಜೆಟ್‌ಗಳಲ್ಲಿ ಕಾಣಿಸುತ್ತದೆ. ಈಗ, ಇಡೀ ದೇಶ ಅವರ ಆಡಳಿತದತ್ತ ನೋಡುತ್ತಿದೆ. ಇಳಿ ವಯಸ್ಸಿನಲ್ಲೂ ಅಷ್ಟೊಂದು ಕೆಲಸ ಹೇಗೆ ನಿಭಾಯಿಸುತ್ತಾರೆ ಎಂಬುದೇ ಅಚ್ಚರಿ’ ಎಂದರು.
ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ‘ಮಹಿಳಾ ಸಬಲೀಕರಣ ವಿಚಾರದಲ್ಲಿ ಸಿದ್ದರಾಮಯ್ಯ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಸ್ತ್ರೀಯರ ಆರ್ಥಿಕ ಪ್ರಗತಿ ಮತ್ತು ಸ್ವಾವಲಂಬನೆಯ ಬದುಕಿಗಾಗಿ ಹಲವು ಯೋಜನೆಗಳನ್ನು ನೀಡಿದ್ದಾರೆ. ಇವುಗಳಿಂದ ಪುರುಷರಿಗೆ ಪರೋಕ್ಷವಾಗಿ ಲಾಭವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.
ಅರ್ಥಪೂರ್ಣವಾಗಿ: ಅಧ್ಯಕ್ಷತೆ ವಹಿಸಿದ್ದ ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್, ‘2025 ಮೈಸೂರು ಭಾಗದ ಕಾಂಗ್ರೆಸ್ಸಿಗರಿಗೆ ಮಹತ್ವದ ವರ್ಷ. ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆ, ಜಿಲ್ಲಾ ಕಾಂಗ್ರೆಸ್‌ಗೆ 75 ವಸಂತಗಳ ಸಂಭ್ರಮ ಹಾಗೂ ಸಿದ್ದರಾಮಯ್ಯ ಅವರ 78ನೇ ಜನ್ಮದಿನ ಅರ್ಥಪೂರ್ಣವಾಗಿ ನಡೆದಿವೆ’ ಎಂದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿದರು. ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಮಾಜಿ ಸಚಿವ ಕೋಟೆ ಶಿವಣ್ಣ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವಿ ಮಾವಿನಹಳ್ಳಿ, ಜಿಲ್ಲಾ ಮೀನುಗಾರರು ಘಟಕದ ಅಧ್ಯಕ್ಷ ಸಿದ್ದಯ್ಯ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಪ್ರವೀಣ್ ಸಿದ್ದಲಿಂಗಪುರ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಪದಾಧಿಕಾರಿಗಳಾದ ಶಿವಪ್ರಸಾದ್, ನಾಗೇಶ, ತಲಕಾಡು ಮಂಜುನಾಥ್, ಮೋದಾಮಣಿ, ಪ್ರಣತಿ ಪ್ರಕಾಶ್, ಕೆ. ಶಿವರಾಂ, ನಟರಾಜ್, ರೈತ ಘಟಕದ ಮಹದೇವ್ ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಅವರ ವಿರುದ್ಧದ ಷಡ್ಯಂತ್ರಕ್ಕೆ ಫಲ ಸಿಗದು. ಬಿಜೆಪಿಯ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಿದ್ಧವಿದ್ದೇವೆ.– ಬಿ.ಜೆ. ವಿಜಯ್‌ಕುಮಾರ್, ಅಧ್ಯಕ್ಷ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿ
ಕೋಮುವಾದ ಮತ್ತು ಮನುವಾದವನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ನಮ್ಮ ಉದ್ದೇಶವಾಗಬೇಕು.– ಬಿ.ಟಿ. ಲಲಿತಾ ನಾಯಕ್, ಮಾಜಿ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.