ADVERTISEMENT

ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಸಿದ್ದರಾಮಯ್ಯ

ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 7:20 IST
Last Updated 26 ಜುಲೈ 2025, 7:20 IST
<div class="paragraphs"><p>ಸಿದ್ದರಾಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ

   

ಮೈಸೂರು: ‘ಮೈಸೂರು ನಗರದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗಿಂತಲೂ ಹೆಚ್ಚು ಅಥವಾ ಅಷ್ಟೇ ಪ್ರಮಾಣದಲ್ಲಿ ಅನುದಾನ ನೀಡಿರುವುದು ಸಿದ್ದರಾಮಯ್ಯ ಮಾತ್ರ’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ನಗರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಅವರು ಮಾಡಿದ್ದಾರೆ. ಆದ್ದರಿಂದಲೇ ಇಲ್ಲಿ ಸಾಧನಾ ಸಮಾವೇಶ ಮಾಡಿದೆವು. ವಿರೋಧ ಪಕ್ಷದವರು ಸುಮ್ಮನೆ ಟೀಕಿಸುತ್ತಾರೆ’ ಎಂದು ತಿರುಗೇಟು ನೀಡಿದರು.

ADVERTISEMENT

ಯದುವೀರ್ ತಿರುಗೇಟು: ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ‘ಇಡಿ ವಿಶ್ವವೇ ಮೈಸೂರು ಸಂಸ್ಥಾನವನ್ನು ತಿರುಗಿ ನೋಡುವಂತೆ ಅಭಿವೃದ್ದಿಗೊಳಿಸಿ,ˌಜನಪರ ಆಡಳಿತವನ್ನು ನಡೆಸಿ, ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಜರಾಮರರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು ಏನೆಂಬುದು ನಮ್ಮ ಕಣ್ಣ ಮುಂದೆಯೇ ಇವೆ’ ಎಂದು ತಿಳಿಸಿದ್ದಾರೆ.

‘ಮೈಸೂರು ಜಿಲ್ಲೆಯವರಾದ ಸಿದ್ದರಾಮಯ್ಯ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೂ, ಎಷ್ಟೇ ಅನುದಾನಗಳನ್ನು ನೀಡಿˌ ಅಭಿವೃದ್ಧಿಗೊಳಿಸಿದ್ದರೂ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದು ಸಮಾಜಕ್ಕೆ ತಲುಪಿದೆ ಎಂಬುದನ್ನು ಜನ ನೋಡಿದ್ದಾರೆ. ಅದಕ್ಕೆ ಸರಿಯಾದ ಉತ್ತರವನ್ನು 2018ರಲ್ಲೇ ಚಾಮುಂಡೇಶ್ವರಿ ಕ್ಷೇತ್ರದ ಜನ ಕೊಟ್ಟಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

‘ಅಂದಿನ ಪರಿಸ್ಥಿತಿಯಲ್ಲಿ ನಾಲ್ವಡಿ ಮಹಾರಾಜರು ಈ ಮೈಸೂರು ಪ್ರಾಂತ್ಯದಲ್ಲಿ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡು ತಮ್ಮ ದೂರದೃಷ್ಟಿಯ ಆಡಳಿತದಿಂದ ಅಕ್ಷರಶಃ ಸುವರ್ಣಯುಗವನ್ನೇ ಸೃಷ್ಟಿಸಿದ್ದರು. ಮಹನೀಯರ ಸಾಧನೆ ಗೌರವಿಸಿ ಸ್ಮರಿಸಬೇಕೆ ಹೊರತು, ಅದನ್ನು ಅಳೆದು ತೂಗಿ ಹೋಲಿಸಬಾರದು. ಮುಖ್ಯಮಂತ್ರಿಯ ಮಗ ಎಂಬ ಕಾರಣಕ್ಕೆ ಯಂತೀಂದ್ರ ಅವರು ಏನು ಬೇಕಾದರೂ ಹೇಳಿಕೆ ನೀಡಬಾರದು. ಅವರು ಕೊಟ್ಟಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು’ ಎಂದು ಹೇಳಿದ್ದಾರೆ.

‘ಮೈಸೂರು ಸಂಸ್ಥಾನವನ್ನಾಳಿದ ಪ್ರತಿ ಮಹಾರಾಜರೂ ಈ ನೆಲದಲ್ಲಿ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆˌ ಅವು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಆಸರೆಯಾಗಿವೆ. ಅವುಗಳಿಗೆ, ಕೇವಲ ರಾಜಕೀಯ ಕಾರಣಕ್ಕಾಗಿ ಮಾತಿನ ಕೊಡಲಿ ಪೆಟ್ಟು ನೀಡುವ ಪ್ರಯತ್ನ ಮಾಡಬಾರದು. ಅದು ಎಂದಿಗೂ ಫಲ ಕೊಡುವುದಿಲ್ಲ. ಸಾಂವಿಧಾನಿಕ ಹಾಗೂ ಪ್ರಜಾತಂತ್ರದ ಜವಾಬ್ದಾರಿಯುತ ಹುದ್ದೆಯಲ್ಲಿರುವ ಯತೀಂದ್ರ ಅವರಿಗೂ ಮತ್ತು ಮುಖ್ಯಮಂತ್ರಿಯ ಗೌರವಕ್ಕೂ ಅದು ಶ್ರೇಯಸ್ಸು ತುರುವುದಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.