ಮೈಸೂರು: ತಾನು ಓದಿದ ಹುಟ್ಟೂರ ಸರ್ಕಾರಿ ಶಾಲೆಯ ಹೊಸ ಕಟ್ಟಡವನ್ನು ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿ ಸಂಭ್ರಮಿಸಿದರು. ಮುಖ್ಯಮಂತ್ರಿಯೇ ತಮ್ಮ ಶಾಲೆಗೆ ಬಂದಿದ್ದನ್ನು ಕಂಡು ಪುಳಕಗೊಂಡ ಮಕ್ಕಳು ಖುಷಿಯಿಂದ ಕೈ ಕುಲುಕಿ ಆನಂದಪಟ್ಟರು.
ತಾಲ್ಲೂಕಿನ ಸಿದ್ದರಾಮನಹುಂಡಿಯ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ (ಹಿರಿಯ ಪ್ರಾಥಮಿಕ ವಿಭಾಗ) ಆವರಣದಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಸಿದ್ದರಾಮಯ್ಯ ಐದರಿಂದ ಏಳನೇ ತರಗತಿಯವರೆಗೂ ಇಲ್ಲಿಯೇ ಓದಿದ್ದರು. ಉದ್ಘಾಟನೆ ಸಂದರ್ಭ ಅದೆಲ್ಲವನ್ನೂ ಮಾಧ್ಯಮದ ಜೊತೆ ನೆನಪಿಸಿಕೊಂಡರು. ಊರಿನ ಹಿರಿಯ–ಕಿರಿಯರು ಅವರಿಗೆ ಎಲ್ಲವನ್ನೂ ನೆನಪು ಮಾಡಿದರು.
‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಶಾಲೆಯನ್ನು ದತ್ತು ಪಡೆದಿದೆ. ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಹುಟ್ಟೂರಿನ ಋಣ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ. ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಜೊತೆಗೆ ಪಿಯು ಕಾಲೇಜು ಸಹ ಇದೆ. ಅಗತ್ಯದಷ್ಟು ವಿದ್ಯಾರ್ಥಿಗಳು ಸಿಗುವುದಿಲ್ಲವೆಂಬ ಕಾರಣಕ್ಕೆ ಪದವಿ ಕಾಲೇಜು ತೆರೆದಿಲ್ಲ. ಊರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಬಿಸಿಎಂ ವಿದ್ಯಾರ್ಥಿನಿಲಯ, ಪಶು ಚಿಕಿತ್ಸಾ ಕೇಂದ್ರ, ಗ್ರಂಥಾಲಯ ಎಲ್ಲವೂ ಇದೆ. ಬಿಜೆಪಿಯವರಿಗೆ ಈ ಅಭಿವೃದ್ಧಿ ಕಾಣದು’ ಎಂದರು.
ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ವಿಧಾನಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ಕೆ.ವಿ. ತ್ರಿಲೋಕಚಂದ್ರ, ಡಿಡಿಪಿಐ ಜವರೇಗೌಡ, ಕೆಐಎಎಫ್ ಪ್ರತಿನಿಧಿಗಳು ಪಾಲ್ಗೊಂಡರು.
ನಡೆಯದ ಸಂವಾದ:
ಕಟ್ಟಡ ಉದ್ಘಾಟನೆ ಬಳಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಿದ್ದರಾಮಯ್ಯ ಸಂವಾದ ನಡೆಸಬೇಕಿತ್ತು. ಆದರೆ ಚಿಕ್ಕ ಕೊಠಡಿಗೆ ಗಣ್ಯರ ಜೊತೆಗೆ ಏಕಾಏಕಿ ಸ್ಥಳೀಯರು ನುಗ್ಗಿದ್ದರಿಂದ ಕಾರ್ಯಕ್ರಮ ಅಸ್ತವ್ಯಸ್ತವಾಯಿತು. ತಳ್ಳಾಟ–ನೂಕಾಟ ಜೋರಾದಾಗ ಮುಖ್ಯಮಂತ್ರಿ ಸಾಂಕೇತಿಕವಾಗಿ ಜ್ಯೋತಿ ಬೆಳಗಿಸಿ ಹೊರ ನಡೆದರು.
ಸಂವಾದಕ್ಕಾಗಿ ಒಂದು ವಾರದಿಂದಲೂ ಶಿಕ್ಷಕರು– ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದರು. ಟಿಪ್ಪಣಿ–ಪ್ರಶ್ನೆಗಳನ್ನೂ ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಸ್ವತಃ ಮುಖ್ಯಮಂತ್ರಿಯನ್ನು ಕೈಕುಲುಕಿದ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾದರೂ ಸಂವಾದ ನಡೆಯದಿರುವುದಕ್ಕೆ ಬೇಸರಗೊಂಡರು.
ಶಾಲೆ ಉದ್ಘಾಟನೆ ಬಳಿಕ ಸಿದ್ದರಾಮಯ್ಯ ಅವರು, ಈಚೆಗೆ ನಿಧನರಾದ ಸ್ನೇಹಿತ ಬೆಟ್ಟಮ್ಮನ ನಿಂಗಯ್ಯ ಅವರ ಮನೆಗೆ ಭೇಟಿ ಸೇರಿದಂತೆ ಹಲವು ಕಡೆಗೆ ಹೋಗುವ ನಿರೀಕ್ಷೆ ಇತ್ತು. ಆದರೆ ರಾಷ್ಟ್ರಪತಿ ಸ್ವಾಗತಕ್ಕೆ ತುರ್ತಾಗಿ ತೆರಳಿದರು.
69 ವರ್ಷದ ಇತಿಹಾಸ:
ಸಿದ್ದರಾಮನಹುಂಡಿ ಗ್ರಾಮದಲ್ಲಿ 1956ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿದ್ದು, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಇದನ್ನು ಉದ್ಘಾಟಿಸಿದ್ದರು. 2019–20ರಲ್ಲಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಾರ್ಪಡಿಸಿದ್ದು, 2023–24ರಲ್ಲಿ ಪಿ.ಎಂ.ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ಮಾನ್ಯತೆ ನೀಡಲಾಗಿದೆ. ಸದ್ಯ ಇಲ್ಲಿ (ಹಿರಿಯ ಪ್ರಾಥಮಿಕ ವಿಭಾಗ) 490 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.