ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸುತ್ತಿರುವ ಬಿಜೆಪಿ– ಜೆಡಿಎಸ್ ಪಕ್ಷದೊಂದಿಗೆ ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ದನಿಗೂಡಿಸಿರುವುದು ನೋವು ತಂದಿದೆ. ಸಿದ್ದರಾಮಯ್ಯ ಎಂದಿಗೂ ಒಬ್ಬಂಟಿಯಲ್ಲ. ಅವರೊಂದಿಗೆ ನಾಡಿನ ಜನರಿದ್ದಾರೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
‘ಸಿದ್ದರಾಮಯ್ಯ ಒಬ್ಬಂಟಿ, ಹೆದರಿದ್ದಾರೆ, ಬೆದರಿದ್ದಾರೆ ಎಂದು ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಒಬ್ಬಂಟಿಯಾಗಿ ಬೆಳೆದ ನಾಯಕರಲ್ಲ, ಅವರೊಬ್ಬ ಜನನಾಯಕ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ವಿಶ್ವನಾಥ್ ಅವರೂ ಅಹಿಂದ ನಾಯಕನ ಹಣಿಯಲು ಮುಂದಾಗಿರುವುದು ದುರ್ದೈವದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿ ಸಚಿವ ಸಂಪುಟದ ಮುಖ್ಯಸ್ಥರು. ಸಚಿವರ ಕಚೇರಿಗಳಲ್ಲಿ ನಡೆಯುವ ಚಟುವಟಿಕೆಗಳಿಗೆ ಉತ್ತರದಾಯಿಗಳೇ ಹೊರತು ಹೊಣೆಗಾರರಲ್ಲ. ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ರಚಿಸಲಾಗಿದೆ. ಅದೇ ರೀತಿ ಮುಡಾ ಹಗರಣದ ತನಿಖೆಗೂ ಸಮಿತಿ ರಚಿಸಲಾಗಿದೆ. ತನಿಖೆ ನಡೆದು ಅಂತಿಮ ತೀರ್ಪು ಬರುವವರೆಗೂ ಸಂವಿಧಾನಕ್ಕೆ ತಲೆಬಾಗಿ ಕಾಯಬೇಕು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.