ಮೈಸೂರು: ‘ನೀವು ಭ್ರಷ್ಟಾಚಾರ ಮಾಡುತ್ತಿದ್ದೀರಿ, ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದೀರಿ ಎಂದು ಹೇಳುವುದು ಹೊಲಸು ರಾಜಕಾರಣವೇ (ಡರ್ಟಿ ಪಾಲಿಟಿಕ್ಸ್)?’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶದಿಂದ ಕೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದೀರಿ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ಅದನ್ನೇ ನಾವೂ ಹೇಳುತ್ತಿದ್ದೇವೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರವಿದು ಎಂದು ನಾಡಿನ ಜನರೇ ಚರ್ಚಿಸುತ್ತಿದ್ದಾರೆ’ ಎಂದರು.
‘ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರಾಜಕೀಯದಲ್ಲಿ ಸೋಲು–ಗೆಲುವು ಸಹಜ. ಅಷ್ಟಕ್ಕೂ ಈಗ ನಡೆಯುತ್ತಿರುವುದು ಚುನಾವಣೆಯಲ್ಲ. ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಗಳಲ್ಲಿ ಸೋಲಾಗಿಲ್ಲವೇ? ಪಂಜಾಬ್, ಕೇರಳ, ತಮಿಳುನಾಡು, ತೆಲಂಗಾಣ, ಕೋಲ್ಕತ್ತಾದಲ್ಲಿ ಬಿಜೆಪಿಯವರು ಗೆಲ್ಲಲಾಗಿಲ್ಲವೇಕೆ?’ ಎಂದು ಕೇಳಿದರು.
‘ಟೀಕೆಗಳೆ ನನಗೆ ಟಾನಿಕ್’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಟೀಕೆಗೂ–ನಮಗೂ ಸಂಬಂಧವಿಲ್ಲ ಎಂದು ಹೇಳುವವರು ಭಂಡ ಜನಗಳು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.