ADVERTISEMENT

ತಿದ್ದುಪಡಿ ತಂದ ಸಿದ್ದರಾಮಯ್ಯ ಮೌನ: ಎಚ್‌.ವಿಶ್ವನಾಥ್ ಆರೋಪ

ಭೂಸುಧಾರಣೆ ಕಾಯ್ದೆ: ಎಚ್‌.ವಿಶ್ವನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 1:49 IST
Last Updated 8 ಅಕ್ಟೋಬರ್ 2020, 1:49 IST
ಅಡಗೂರು ಎಚ್ ವಿಶ್ವನಾಥ್ ವಿಧಾನಪರಿಷತ್ ಸದಸ್ಯ
ಅಡಗೂರು ಎಚ್ ವಿಶ್ವನಾಥ್ ವಿಧಾನಪರಿಷತ್ ಸದಸ್ಯ   

ಹುಣಸೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ಭೂಸುಧಾರಣೆ ಕಾಯ್ದೆ 75 (ಬಿ) ತಿದ್ದುಪಡಿ ತಂದು ಬಂಡವಾಳಶಾಹಿಗಳು ಭೂಮಿ ಖರೀದಿಸಲು ಅವಕಾಶ ನೀಡಿ ಕಾಯ್ದೆ ಕೊಲೆ ಮಾಡಿ ಮೌನವಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಚಾಟಿ ಬೀಸಿದರು.

‘ಕಾಂಗ್ರೆಸ್ ಭೂಸುಧಾರಣೆ ಕುರಿತು ಧರಣಿ, ಸತ್ಯಾಗ್ರಹ ನಡೆಸುತ್ತಿದ್ದು, ಸಿದ್ದರಾಮಯ್ಯ ಅವರ ಅಧಿಕಾರದಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳ ಶಾಹಿಗಳಿಗೆ ಮಣೆ ಹಾಕಿದ್ದರು. ಇದರಿಂದಾಗಿ ರಾಜ್ಯದಲ್ಲಿ ಭೂಮಿ ಖರೀದಿಸುವವರ ಆದಾಯವನ್ನು ₹ 24 ಲಕ್ಷಕ್ಕೆ ಹೆಚ್ಚಿಸಿ ಬಂಡವಾಳಶಾಹಿಗಳು ಭೂಮಿ ಖರೀದಿಸಲು ಹಾಸಿಗೆ ಹಾಕಿದ್ದನ್ನು ಕಾಂಗ್ರೆಸ್ ಪಕ್ಷದವರು ಮರೆತು, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿದ್ದು ಹೋರಾಟಗಾರರು ಕಾಯ್ದೆಯಲ್ಲಿ ಸಾಧಕ– ಬಾಧಕವನ್ನು ಚರ್ಚಿಸಿ ತಪ್ಪು ಸರಿಪಡಿಸಲು ಸಲಹೆ ನೀಡುವ ಬದಲಿಗೆ ಬೀದಿಗಿಳಿದು ಹೋರಾಡುವುದರಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಈ ಸಣ್ಣ ವಿಚಾರಗಳು ಅರಿಯದ ರೈತ ನಾಯಕರು ಕಾಂಗ್ರೆಸ್ ಪಕ್ಷದ ಕೈಗೊಂಬೆ ಯಾಗಿ ಹೋರಾಟ ನಡೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ADVERTISEMENT

ಸಿದ್ದರಾಮಯ್ಯ ರಾಜ್ಯದಲ್ಲಿ ಜಾತಿಗಣತಿ ವರದಿ ಕುರಿತು ಧ್ವನಿ ಎತ್ತಿದ್ದಾರೆ. ಅವರ ಅವಧಿಯಲ್ಲೇ ₹ 260 ಕೋಟಿ ವೆಚ್ಚದಲ್ಲಿ ಸಮಿತಿ ರಚಿಸಿ ಅಧ್ಯಯನ ನಡೆಸಿದ್ದರೂ, ಸದನದಲ್ಲಿ ವರದಿ ಮಂಡಿಸಲು ಅವಕಾಶ ನೀಡಲಿಲ್ಲ. ಈಗ ಜಾತಿಗಣತಿ ಕುರಿತು ಚರ್ಚಿಸಿ ರಾಜಕೀಯ ಲೇಪನ ಮಾಡುತ್ತಿದ್ದಾರೆ. ‘ಅವರೇ ಹುಟ್ಟು ಹಾಕಿದ ಕೂಸಿಗೆ ಅವರಿಂದಲೇ ಹಾಲು ಕುಡಿಸಲಾಗಲಿಲ್ಲ’ ಎಂಬ ಬೇಸರವಿದೆ ಎಂದರು.

ಶಾಲೆ ದತ್ತು: ವಿಧಾನಪರಿಷತ್ ಸದಸ್ಯರಾದ ಬಳಿಕ ಸರ್ಕಾರದಿಂದ ₹ 50 ಲಕ್ಷ ಅನುದಾನ ಬಂದಿದ್ದು, ಈ ಹಣದಿಂದ ಹುಣಸೂರು, ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ತಾಲ್ಲೂಕಿನಲ್ಲಿ ಕೊಳಚೆ ಪ್ರದೇಶದಲ್ಲಿ ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿಮಾಡಲು ಬಳಸುತ್ತೇನೆ.

ತಾಲ್ಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ನಾಲೆ ಆಧುನೀಕರಣಕ್ಕೆ 2019ರಲ್ಲಿ ₹ 60 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ ಯೋಜನೆ ಸಿದ್ಧಗೊಂಡಿದ್ದು ಅನುದಾನ ಬಿಡುಗಡೆ ಆದ ಬಳಿಕ ಕಾಮಗಾರಿ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.