ADVERTISEMENT

ಮೈಸೂರು | ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ: ಎಂ.ಲಕ್ಷ್ಮಣ ಬಣ್ಣನೆ

ಪೌರ ಕಾರ್ಮಿಕರಿಗೆ ಬಟ್ಟೆ, ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:53 IST
Last Updated 13 ಆಗಸ್ಟ್ 2025, 2:53 IST
ನಂಜನಗೂಡು ತಾಲ್ಲೂಕಿನ ತಾಂಡವಪುರದಲ್ಲಿ ಮಂಗಳವಾರ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು
ನಂಜನಗೂಡು ತಾಲ್ಲೂಕಿನ ತಾಂಡವಪುರದಲ್ಲಿ ಮಂಗಳವಾರ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು   

ನಂಜನಗೂಡು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಬಡವರ, ಶೋಷಿತ ವರ್ಗಗಳ ಧ್ವನಿಯಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ತಾಲ್ಲೂಕಿನ ತಾಂಡವಪುರದಲ್ಲಿ ಮಂಗಳವಾರ ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ಹಾಗೂ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಜನ್ಮದಿನವನ್ನು 40 ವರ್ಷಗಳಿಂದ ಅವರ ಒಡನಾಡಿಯಾಗಿರುವ ಬಿ.ಎಂ.ರಾಮು ನೇತೃತ್ವದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಗುತ್ತಿದೆ. ಸಿದ್ದರಾಮಯ್ಯನವರು ಚುನಾವಣೆ ಸಂದರ್ಭದಲ್ಲಿ ಜನರಿಗೆ ವಾಗ್ದಾನ ನೀಡಿದ್ದಂತೆ 5 ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೆ ತಂದು ರಾಜ್ಯದಲ್ಲಿ ಬಡತನ ನಿವಾರಣೆಗೆ ಕಾರಣರಾಗಿದ್ದಾರೆ ಎಂದರು.

ADVERTISEMENT

13 ಬಜೆಟ್ ಮಂಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಪಾತ್ರವಹಿಸಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ದುಡಿದಿದ್ದಾರೆ. ಅವರ ವಿರುದ್ಧ ಪಿತೂರಿ ನಡೆಸಿದ ಬಿಜೆಪಿ ಮುಡಾ ಹಗರಣದಲ್ಲಿ ಅವರ ಕುಟುಂಬವನ್ನು ಗುರಿಮಾಡಿ ಅಪಪ್ರಚಾರ ನಡೆಸಿತ್ತು. ಸುಪ್ರೀಂಕೋರ್ಟ್ ಇ.ಡಿಗೆ ಛಿಮಾರಿ ಹಾಕಿದೆ. ಸಿದ್ದರಾಮಯ್ಯ ರಾಜ್ಯದ ಪ್ರಶ್ನಾತೀತ ನಾಯಕ ಎಂದು ತಿಳಿಸಿದರು.

ಮಾಜಿ ಜಿ.ಪಂ ಅಧ್ಯಕ್ಷ ಬಿ.ಎಂ.ರಾಮು ಮಾತನಾಡಿ, ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಕ್ಷೇತ್ರ ವಿಗಂಡನೆ ಸಂದರ್ಭದಲ್ಲಿ ವರುಣ ಕ್ಷೇತ್ರದ ತಾಂಡವಪುರ, ಬಂಚಳ್ಳಿ ಹುಂಡಿ, ಕೆಂಪಿಸಿದ್ದನಹುಂಡಿ ಗ್ರಾಮಗಳ ಅಭಿಮಾನಿಗಳು ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ನಡೆಸಿ ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸಿದರು. ಇಲ್ಲಿಂದಲೆ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾದರು ಎಂದರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಯಿತು.

ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡರಾದ ಬಿ.ಆರ್.ರಾಕೇಶ್, ಹುಚ್ಚೇಗೌಡ, ಬಿ.ಎಂ.ನಾಗರಾಜು, ಅರ್ಕೇಶ್, ನಾರಾಯಣ, ರವಿ, ಪುನೀತ್, ಶಂಕರ್, ಗ್ರಾ.ಪಂ ಅಧ್ಯಕ್ಷ ಮಹದೇವು, ಸದಸ್ಯರಾದ ಗಿರೀಶ್, ಶಿವರಾಜು, ಟಿ.ಜೆ.ಮಹದೇವು, ಪ್ರಭುಸ್ವಾಮಿ, ವಿಶ್ವನಾಥ್, ಬಿ.ಬಿ.ಕುಮಾರ್, ಆನಂದ, ಮಹದೇವು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.