ADVERTISEMENT

ಸಮಾಜದ ಕನ್ನಡಿ ಒಡೆಯುತ್ತಿದೆ– ಪ್ರೊ.ಡಿ.ಆನಂದ

ಮಾಧ್ಯಮಗಳು ವ್ಯಾಪಾರೀಕರಣಗೊಂಡಿರುವುದಕ್ಕೆ ಕಳವಳ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:08 IST
Last Updated 8 ಮಾರ್ಚ್ 2021, 5:08 IST
ಮೈಸೂರಿನ ಗೋವರ್ಧನ್ ಹೋಟೆಲ್‌ನಲ್ಲಿ ಭಾನುವಾರ ನಡೆದ ‘ಕನ್ನಡಿಗರ ಭುವನ ಸಂಗಾತಿ’ ಪಾಕ್ಷಿಕದ 21ನೇ ವಾರ್ಷಿಕೋತ್ಸವವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಉದ್ಘಾಟಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ, ಪ್ರೊ.ಡಿ.ಆನಂದ, ಪತ್ರಕರ್ತ ಸೋಮಯ್ಯ ಮಲೆಯೂರು ಇದ್ದಾರೆ
ಮೈಸೂರಿನ ಗೋವರ್ಧನ್ ಹೋಟೆಲ್‌ನಲ್ಲಿ ಭಾನುವಾರ ನಡೆದ ‘ಕನ್ನಡಿಗರ ಭುವನ ಸಂಗಾತಿ’ ಪಾಕ್ಷಿಕದ 21ನೇ ವಾರ್ಷಿಕೋತ್ಸವವನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಉದ್ಘಾಟಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ, ಪ್ರೊ.ಡಿ.ಆನಂದ, ಪತ್ರಕರ್ತ ಸೋಮಯ್ಯ ಮಲೆಯೂರು ಇದ್ದಾರೆ   

ಮೈಸೂರು: ಮಾಧ್ಯಮಗಳು ಸಮಾಜದ ಕನ್ನಡಿ. ಈಗ ಕನ್ನಡಿ ಒಡೆಯುತ್ತಿದೆ. ಇದಕ್ಕೆ ಮಾಸ್ಕ್ ಹಾಕಲಾಗುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಆನಂದ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಗೋವರ್ಧನ್ ಹೋಟೆಲ್‌ನಲ್ಲಿ ಭಾನುವಾರ ನಡೆದ ‘ಕನ್ನಡಿಗರ ಭುವನ ಸಂಗಾತಿ’ ಪಾಕ್ಷಿಕದ 21ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಜನರ ನೋವಿಗೆ ಸ್ಪಂದಿಸಬೇಕಿದ್ದ ಮಾಧ್ಯಮಗಳು ಈಗ ಅಂತರರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸುತ್ತಿವೆ. ಬಂಡವಾಳ ಹಾಕಿ ಹೆಚ್ಚು ಹೆಚ್ಚು ಹಣ ಗಳಿಸುವ ಉದ್ಯಮವಾಗಿದೆ. ತಮ್ಮ ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮಗಳು ಹೆಜ್ಜೆ ಹಾಕುತ್ತಿವೆ ಎಂದರು.

ADVERTISEMENT

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ‘ಸರ್ಕಾರಗಳು ಜನರ ಕಣ್ಣಿಗೆ ಮಣ್ಣನ್ನು ಮಾತ್ರವಲ್ಲ ಖಾರದ ಪುಡಿಯನ್ನೂ ಎರಚುತ್ತಿವೆ’ ಎಂದು ಕಿಡಿಕಾರಿದರು.

ರೈತರ, ಕಾರ್ಮಿಕರ, ಮಹಿಳೆಯರ ದನಿಯನ್ನು ಅಡಗಿಸಲಾಗುತ್ತಿದೆ. ರಾಜಪ್ರಭುತ್ವಕ್ಕಿಂತಲೂ ಹೆಚ್ಚಿನ ಸರ್ವಾಧಿಕಾರತ್ವ ಕಂಡು ಬರುತ್ತಿದೆ. ನಾವೇನು ಜೀತದಾಳುಗಳಾ ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್‌ವಾದಿಗಳು ಮೌನವಾಗಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತನಾಡಿ, ‘ಒಂದು ವಾರದಿಂದ ಸುದ್ದಿವಾಹಿನಿಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ನೋಡಿದರೆ ತಲೆತಗ್ಗಿಸುವಂತಾಗಿದೆ. ನಿರ್ಲಕ್ಷಿತರ ನೋವಿಗೆ ಸ್ಪಂದಿಸುವಂತಹ ಜವಾಬ್ದಾರಿಯನ್ನು ಮಾಧ್ಯಮಗಳು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶಸ್ವಾಮೀಜಿ, ಪತ್ರಕರ್ತ ಸೋಮಯ್ಯ ಮಲೆಯೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.