ADVERTISEMENT

ಮೈಸೂರು: ಜಾನುವಾರು ಗಣತಿಗೆ ವಿಶೇಷ ಆ್ಯಪ್‌

2025ರ ಫೆಬ್ರುವರಿವರೆಗೆ 21ನೇ ರಾಷ್ಟ್ರೀಯ ಜಾನುವಾರು ಗಣತಿ, ಪಶು ಇಲಾಖೆ ಪೂರ್ವ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 6:23 IST
Last Updated 29 ಅಕ್ಟೋಬರ್ 2024, 6:23 IST
<div class="paragraphs"><p>ಜಾನುವಾರು (ಸಂಗ್ರಹ ಚಿತ್ರ)</p></div>

ಜಾನುವಾರು (ಸಂಗ್ರಹ ಚಿತ್ರ)

   

ಮೈಸೂರು: ಜಿಲ್ಲೆಯಲ್ಲಿ 21ನೇ ರಾಷ್ಟ್ರೀಯ ಜಾನುವಾರು ಗಣತಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸುತ್ತಿದ್ದ ಗಣತಿಕಾರರು ಈ ಬಾರಿ ಮೊದಲ ಬಾರಿಗೆ ಸ್ಮಾರ್ಟ್‌ ಫೋನ್ ಆ್ಯಪ್ ಬಳಸಿ ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಕೆಲವೇ ದಿನಗಳಲ್ಲಿ ಚಾಲನೆ ಪಡೆಯುವ ನಿರೀಕ್ಷೆ ಇದೆ.

ADVERTISEMENT

ಕೇಂದ್ರ ಪಶುಸಂಗೋಪನಾ ಇಲಾಖೆಯಿಂದಲೇ ‘21ನೇ ಲೈವ್ ಸ್ಟಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಬಳಸುವ ಬಗ್ಗೆಯೂ ತರಬೇತಿ ನೀಡಲಾಗಿದೆ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಿತ್ತು. ಈ ಬಾರಿ ಚುಟುಕಾಗಿ ಆ್ಯಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್‌ವರ್ಕ್ ಇಲ್ಲದಿದ್ದರೂ ಈ ಆ್ಯಪ್ ನೆಟ್‌ವರ್ಕ್‌ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿ ಹಂಚಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

ಜಾನುವಾರು ಗಣತಿಯಲ್ಲಿ ಇಲಾಖೆಯ ಎಲ್ಲ ಸಿಬ್ಬಂದಿ ಸಹಾಯಕರಾಗಿ ಪಾಲ್ಗೊಳ್ಳುವರು. ಗಣತಿದಾರರಿಗೆ ಪ್ರತ್ಯೇಕ ಐಡಿ ಕಾರ್ಡ್‌ ಸಹ ನೀಡಲಾಗಿದೆ.
ಡಾ. ನಾಗರಾಜ್, ಉಪ ನಿರ್ದೇಶಕ ಪಶುಸಂಗೋಪನಾ ಇಲಾಖೆ

4 ತಿಂಗಳವರೆಗೆ ನಡೆಯುವ ಈ ಬೃಹತ್ ಸಮೀಕ್ಷಾ ಕಾರ್ಯಕ್ರಮಕ್ಕೆ ಪಶುಸಂಗೋಪನೆ ಇಲಾಖೆ ಸರ್ವ ಸನ್ನದ್ಧವಾಗಿದೆ. ಮಾಸ್ಟರ್ ಟ್ರೇನರ್‌ಗಳ ತರಬೇತಿ ಪೂರ್ಣಗೊಂಡಿದ್ದು, ಗಣತಿದಾರರಿಗೆ ತರಬೇತಿ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.

‘ಜಿಲ್ಲೆಯಲ್ಲಿ 150 ಗಣತಿದಾರರು 35 ಮೇಲ್ವಿಚಾರಕರು ಇರುತ್ತಾರೆ. ಗಣತಿದಾರರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಜಾನುವಾರು ಯಾವುವು?

ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟ್ರೀಚ್‌ ಪಕ್ಷಿಗಳ ಮಾಹಿತಿ ಪಡೆಯಲಾಗುತ್ತದೆ. ಬಿಡಾಡಿ ದನ, ನಾಯಿಗಳ ಮಾಹಿತಿಯನ್ನು ಗಣತಿಯಲ್ಲಿ ಸೇರಿಸಲಾಗುತ್ತದೆ. ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ.

10ಕ್ಕಿಂತ ಹೆಚ್ಚು ದನಗಳಿದ್ದರೆ, 1000ಕ್ಕಿಂತ ಹೆಚ್ಚು ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆ ಮಾಡುತ್ತಿದ್ದರೆ ಅದನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಲಾಗುತ್ತದೆ. ನಗರ ಪ್ರದೇಶದಲ್ಲಿ ಪ್ರತ 6ಸಾವಿರ ಮನೆಗಳಿಗೆ ಒಬ್ಬರು ಗಣತಿದಾರರು, ಗ್ರಾಮೀಣ ಪ್ರದೇಶದಲ್ಲಿ 4500 ಮನೆಗಳಿಗೆ ಒಬ್ಬರು ಗಣತಿದಾರರಂತೆ ನೇಮಕ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

5 ವರ್ಷಗಳಿಗೊಮ್ಮೆ ಸಮೀಕ್ಷೆ:

ಜಾನುವಾರು ಗಣತಿಯನ್ನು 1919ರಿಂದ ಪ್ರಾರಂಭಿಸಲಾಗಿದೆ. ಅಂದಿನಿಂದಲೂ ಇದನ್ನು ಪ್ರತಿ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ 20 ಜಾನುವಾರು ಗಣತಿ ನಡೆದಿದೆ. ಈಗ ನಡೆಯಲಿರುವುದು 21ನೇ ಜಾನುವಾರು ಗಣತಿಯಾಗಿದೆ. ಕರ್ನಾಟಕದಲ್ಲಿನ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವರು. ಅದಕ್ಕಾಗಿ 3,357 ಗಣತಿದಾರರು 730 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಯೋಜನೆ ಸಿದ್ಧಪಡಿಸುವ ಉದ್ದೇಶ’

ಈ ಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ಸರ್ಕಾರ ತಮ್ಮ ಮುಂದಿನ ಯೋಜನೆಯನ್ನು  ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ ಕಾರ್ಯಕ್ರಮ ನಿರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ. ಗಣತಿ ಕಾರ್ಯದಲ್ಲಿ ಯಾವ ಯಾವ ತಳಿಯ ಜಾನುವಾರುಗಳು ಪ್ರಾಣಿಗಳು ಕುಕ್ಕಟಗಳು ಎಷ್ಟಿವೆ ಯಾವ ವಯಸ್ಸಿನವರು ಇವೆ ಎಷ್ಟು ರೈತರು ಯಾವ ವರ್ಗದ ರೈತರು ಹೈನುಗಾರರು ಎಷ್ಟು ಮಹಿಳೆಯರು ಪಶುಪಾಲನೆಯಲ್ಲಿ ತೊಡಗಿದ್ದಾರೆ ಮೊದಲಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಇದಲ್ಲದೆ ಜಾನುವಾರು ಕ್ಷೇತ್ರ ಉದ್ಯಮವಾಗಿ ಅಭಿವೃದ್ಧಿಪಡಿಸಲು ಜಾನುವಾರು ಮತ್ತು ಕುಕ್ಕಟಗಳ ಗುಣಮಟ್ಟ ಸುಧಾರಿಸಲು ರೋಗ ನಿಯಂತ್ರಿಸಲು ಸ್ಥಳೀಯವಾಗಿ ಸುಧಾರಿತ ಜಾನುವಾರು ಸಾಕಣೆಗೆ ರೈತರನ್ನು ಉತ್ತೇಜಿಸಲು ಜಾನುವಾರು ವಲಯದಲ್ಲಿನ ಪ್ರವೃತ್ತಿ ಗುರುತಿಸಲು ಸಂಪನ್ಮೂಲ ನಿಗದಿಪಡಿಸಲು ಗಣತಿ ಸಹಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಜಾನುವಾರು (ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.