ADVERTISEMENT

ವಿಶೇಷ ಕೈಮಗ್ಗ ಮೇಳ- ಸಂಸ್ಕೃತಿ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 17:29 IST
Last Updated 20 ನವೆಂಬರ್ 2019, 17:29 IST

ಮೈಸೂರು: ನಗರದ ಹೆಬ್ಬಾಳದಲ್ಲಿರುವ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ನ. 22ರಿಂದ ಡಿ. 8ರವರೆಗೆ 17 ದಿನ ‘ವಿಶೇಷ ಕೈಮಗ್ಗ ಮೇಳ-ಸಂಸ್ಕೃತಿ 2019’ ಅನ್ನು ಆಯೋಜಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಲಕ್ಷ್ಮಣ ತಳವಾರ ತಿಳಿಸಿದರು.

ನವದೆಹಲಿಯ ಜವಳಿ ಮಂತ್ರಾಲಯ, ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಯೋಗದಲ್ಲಿ ಈ ಮೇಳ ನಡೆಸಲಾಗುವುದು. ಇದರಲ್ಲಿ ದೇಶದ 60 ರಿಂದ 70 ಕೈಮಗ್ಗ ಸಹಕಾರ ಸಂಘಗಳು ಭಾಗಿಯಾಗಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನ. 22 ರಿಂದ ಡಿ.8ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆಯುವ ಈ ಮೇಳದಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ರಾಜ್ಯದ ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆ, ಇಳಕಲ್ ಹಲವು ಪ್ರದೇಶಗಳ ಕೈಮಗ್ಗ ನೇಕಾರ ಸಹಕಾರಿ ಸಂಘಗಳಲ್ಲಿ ತಯಾರಿಸಿದ ರೇಷ್ಮೆ, ಹತ್ತಿ, ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಕಲ್ಬುರ್ಗಿ ಕಂಬಳಿ ವಿಶೇಷವಾಗಿ ಸಿಗಲಿವೆ ಎಂದು ಹೇಳಿದರು.

ADVERTISEMENT

ವಿಶೇಷವಾಗಿ ಬಿಹಾರದ ತಷರ್, ಕಾಂತ, ಬಲಚುರಿ, ಬುಟಿಕ್, ಪಶ್ಚಿಮ ಬಂಗಾಳದ ಬೆಂಗಾಲಿ ಕಾಟನ್, ಉತ್ತರ ಪ್ರದೇಶದ ಬನಾರಸ್, ಚಿಕನ್ ಎಂಬ್ರಾಯ್ಡ್ರ್ , ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ, ಒಡಿಶಾದ ಸಂಬಲ್ ಪುರಿ ಸೀರೆಗಳು ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು.

ನ. 22ರ ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಂಸ್ಕೃತಿಗೆ ಚಾಲನೆ ನೀಡುವರು, ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ. ಜವಳಿ ಅಭಿವೃದ್ಧಿ ಆಯುಕ್ತರಾದ ಉಪೇಂದ್ರ ಪ್ರತಾಪ್ ಸಿಂಗ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿ, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಹಾಗೂ ಇತರರು ಹಾಜರಿರಲಿದ್ದಾರೆ ಎಂದರು.

ಅರ್ಬನ್‌ ಹಾತ್‌ನ ಯೋಜನಾಧಿಕಾರಿ ಎಂ.ಶಿವನಂಜಸ್ವಾಮಿ, ಸಂಯೋಜನಾಧಿಕಾರಿ ರಾಕೇಶ್ ರೈ ಹಾಗೂ ಜವಳಿ ಪ್ರವರ್ಧನಾಧಿಕಾರಿ ಬಿ.ಎಂ. ಒಡೆಯರ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.