ADVERTISEMENT

ಅಕ್ರಮ ಮದ್ಯ ಮಾರಾಟ; ಏಕಕಾಲಕ್ಕೆ ದಾಳಿ

ಜಿಲ್ಲಾ ಪೊಲೀಸರಿಂದ ವಿಶೇಷ ಕಾರ್ಯಾಚರಣೆ; ಕೆಲವೇ ಗಂಟೆಗಳಲ್ಲಿ 20ಕ್ಕೂ ಅಧಿಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಮೇ 2022, 3:57 IST
Last Updated 23 ಮೇ 2022, 3:57 IST

ಮೈಸೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಭಾನುವಾರ ಏಕಕಾಲಕ್ಕೆ ದಾಳಿ ನಡೆಸಿರುವ ಜಿಲ್ಲಾ ಪೊಲೀಸರು ಕೆಲವೇ ಗಂಟೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳು, ಹೋಬಳಿಗಳು ಹಾಗೂ ಠಾಣಾ ವ್ಯಾಪ್ತಿಗಳಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ. ಮಧ್ಯಾಹ್ನ ಆರಂಭವಾದ ಕಾರ್ಯಾಚರಣೆಯಲ್ಲಿ ಸಂಜೆ ಹೊತ್ತಿಗೆ 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಸಿಂಧೂವಳ್ಳಿಯಲ್ಲಿ ಹಾಗೂ ರಮ್ಮನಹಳ್ಳಿಯಲ್ಲಿ ಕಾರ್ಯಾಚರಣೆ ಕೈಗೊಂಡು ರಾಜೇಶ್ ಹಾಗೂ ವೆಂಕಟೇಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ 38 ಪೌಚ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಇದುವರೆಗೂ ಅಲ್ಲೊಂದು ಇಲ್ಲೊಂದು ಪ್ರಕರಣಗಳಷ್ಟೇ ದಾಖಲಾಗುತ್ತಿದ್ದವು. ಆದರೆ, ಏಕಕಾಲಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡ ಉದಾಹರಣೆಗಳು ಇರಲಿಲ್ಲ. ಮುಂದೆ ಇನ್ನಷ್ಟು ಇಂತಹ ದಾಳಿ ನಡೆಸಲು ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೂಚನೆ ನೀಡಿದ್ದಾರೆ.

ಪ್ರತ್ಯೇಕ ಅಪಘಾತ; ಇಬ್ಬರ ಸಾವು

ಮೈಸೂರು ತಾಲ್ಲೂಕಿನ ದಡದಹಳ್ಳಿ ಸಮೀಪ ಭಾನುವಾರ ರಾತ್ರಿ ಕಾರೊಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಕಾರ್ಮಿಕರಿಗೆ ಡಿಕ್ಕಿ ಹೊಡೆದು, ಜಯಮ್ಮ (45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆಯವರಾದ ಅವರು ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿದ್ದ ಪಾತ್ರೆಗಳನ್ನು ತೆಗೆದುಕೊಂಡು ಹೋಗಲೆಂದು ರಸ್ತೆಬದಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಚಾಲಕ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿ.ನರಸೀಪುರ ತಾಲ್ಲೂಕಿನ ಹಿರಿಯೂರು ಸಮೀಪ ಶನಿವಾರ ತಡರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದ ಸಿದ್ದರಾಜು (31) ಎಂಬುವವರಿಗೆ ಸರಕು ಸಾಗಣೆ ವಾಹನವೊಂದು ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಕ್ಕೂರಿನವರಾದ ಸಿದ್ದರಾಜು ಕೂಲಿ ಕೆಲಸ ಮಾಡುತ್ತಿದ್ದರು. ತಿ.ನರಸೀಪುರದಿಂದ ಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಇವರಿಗೆ ಗುದ್ದಿದ ವಾಹನದ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.