ಮುಡುಕುತೊರೆ ದೇವಸ್ಥಾನದ ಕಾಮಗಾರಿಯ ನೋಟ
– ಪ್ರಜಾವಾಣಿ ಚಿತ್ರ: ಎಂ. ಮಹೇಶ್
ಮೈಸೂರು: ಇತಿಹಾಸ ಪ್ರಸಿದ್ಧ ತಲಕಾಡಿನ ಪಂಚಲಿಂಗಗಳಲ್ಲಿ ಒಂದಾಗಿರುವ, ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದ್ದು, ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ದೇವರ ದರ್ಶನಕ್ಕೆಂದು ಬರುವವರು ‘ಸರ್ಕಸ್’ ಮಾಡಬೇಕಾದ ಅನಿವಾರ್ಯತೆ ಇದೆ!
ತಿ.ನರಸೀಪುರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳವರ ಜೊತೆಗೆ ಮೈಸೂರು ಜಿಲ್ಲೆ, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಅಪಾರ ಭಕ್ತರು ಮುಡುಕುತೊರೆಗೆ ಬರುತ್ತಾರೆ. ಶಾಲೆಗಳವರು ವಿದ್ಯಾರ್ಥಿಗಳನ್ನು ಪಿಕ್‌ನಿಕ್‌ಗೆಂದು ಕರೆ ತರುವುದೂ ಉಂಟು. ಜಾತ್ರೆಗೆ ಸಜ್ಜಾಗುತ್ತಿರುವ ಈ ಸುಕ್ಷೇತ್ರದಲ್ಲಿ ಭಕ್ತರಿಗೆ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಾಮಗಾರಿಯು ವಿಳಂಬವಾಗಿರುವುದರಿಂದ ಕ್ಷೇತ್ರ ಮುದುಡಿದೆ.
ಅನುದಾನ ಲಭ್ಯತೆಯಲ್ಲಿ ಆದ ವಿಳಂಬ, ಸರಿಯಾಗಿ ಯೋಜನೆ ರೂಪಿಸದಿರುವುದು, ಮೇಲ್ವಿಚಾರಣೆ ಕೊರತೆ ಕಾರಣಗಳಿಂದ ‘ಕಾಣಿಸುವಂತಹ ಕೆಲಸ ವೇನೂ ಈವರೆಗೂ ಆಗಿಲ್ಲ’ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ! ‘ಹಲವು ವಿಘ್ನಗಳು ಎದುರಾದ್ದರಿಂದ ವಿಳಂಬವಾಗಿತ್ತು. ಅದೆಲ್ಲವನ್ನೂ ಬಗೆಹರಿಸಲಾಗಿದ್ದು, ಕೆಲವು ತಿಂಗಳಿಂದ ಕಾಮಗಾರಿ ಚುರುಕು ಪಡೆದುಕೊಂಡಿದೆ’ ಎನ್ನುತ್ತಾರೆ ಅವರು.
ಭಕ್ತರ ಬೇಡಿಕೆಯಂತೆ: ಬಹಳಷ್ಟು ಭಕ್ತರನ್ನು ಈ ದೇಗುಲ ಹೊಂದಿದ್ದು, ಅವರ ಬಹುದಿನಗಳ ಬೇಡಿಕೆಯಂತೆ, ಪುನರ್‌ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಕಾಮಗಾರಿ ಕಾರಣದಿಂದ ದೇವರ ಮೂರ್ತಿಯನ್ನು ತಗಡು ಮೊದಲಾದವುಗಳಿಂದ ಮಾಡಿದ ಚಿಕ್ಕ ‘ಗುಡಿ’ಯಲ್ಲಿಡಲಾಗಿದೆ. ಅಲ್ಲೇ ಭಕ್ತರು ‘ದರ್ಶನ’ ಪಡೆಯಲೆಂದು ಚಿಕ್ಕಸೇತುವೆಯನ್ನು ನಿರ್ಮಿಸಲಾಗಿದೆ. ಜಾತ್ರೆಯ ವೇಳೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದರ್ಶನ ಪಡೆಯುವ ಸ್ಥಳದಲ್ಲಿ ಅವರನ್ನು ನಿರ್ವಹಿಸುವುದು ಹೇಗೆ ಎಂಬ ತಲೆನೋವು ಅಧಿಕಾರಿಗಳದ್ದು!
2020ರ ನ.25ರಂದು ದೇವಸ್ಥಾನದ ಸಂಕೀರ್ಣದ ಪುನರ್ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ‘ಕ್ಷೇತ್ರವನ್ನು ಅಭಿನವ ಶ್ರೀಶೈಲ ಎಂದೇ ಕರೆಯುತ್ತಾರೆ. ನನಗೆ ಇನ್ನೂ ಎರಡೂವರೆ ವರ್ಷ ಅಧಿಕಾರದ ಅವಧಿ ಇದೆ. ಅಷ್ಟರೊಳಗೆ ಕೆಲಸಗಳನ್ನು ಮುಗಿಸಬೇಕು’ ಎಂದು ಸೂಚಿಸಿದ್ದರು.
‘ಪುನರ್ ನಿರ್ಮಾಣಕ್ಕೆ ₹30 ಕೋಟಿ ಬೇಕಾಗುತ್ತದೆ ಎಂದು ಯೋಜನೆ ರೂಪಿಸಲಾಗಿದೆ. ₹ 5 ಕೋಟಿ ಬಿಡುಗಡೆಯಾಗಿದ್ದು, ವಾರದೊಳಗೆ ₹ 10 ಕೋಟಿ ನೀಡಲಾಗುವುದು. ಗುತ್ತಿಗೆದಾರರು ಹಗಲು– ರಾತ್ರಿ ಕೆಲಸ ಮಾಡಿ 2 ವರ್ಷದೊಳಗೆ ಪೂರ್ಣಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು (ಆಗ ಎಸ್.ಟಿ. ಸೋಮಶೇಖರ್) ಕ್ಷೇತ್ರಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದ್ದರು. ಆದರೆ, ನಂತರ ನಿರೀಕ್ಷಿಸಿದಷ್ಟು ವೇಗದಲ್ಲಿ ಕೆಲಸಗಳು ನಡೆದಿಲ್ಲ.
ಹಲವು ಕಾರಣ: ‘ವಾಸ್ತು ದೋಷ, ಅರ್ಚಕರು ಯೋಜನೆಯಲ್ಲಿ ಬದಲಾವಣೆ ಮಾಡಿಸಿದ್ದು, ಗರ್ಭಗುಡಿಯ ಬಾಗಿಲಿಗೂ ಮುಖ್ಯದ್ವಾರದ ಬಾಗಿಲಿಗೂ ವ್ಯತ್ಯಾಸ ಕಾಣಿಸಿಕೊಂಡಿದ್ದು ಮೊದಲಾದ ಕಾರಣದಿಂದ ಕಾಮಗಾರಿಯು ನಿಧಾನವಾಯಿತು. ಹೈದರಾಬಾದ್, ಕುಂಭಕೋಣಂ, ಕುಕ್ಕೆ ಸುಬ್ರಹ್ಮಣ್ಯ, ಉತ್ತರಕನ್ನಡ ಮೊದಲಾದ ಕಡೆಗಳಿಂದ ವಾಸ್ತುಶಾಸ್ತ್ರಜ್ಞರನ್ನು ಕರೆಸಿ ವಾಸ್ತು ಮಾಡಿಸಲಾಯಿತು. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಸಮಿತಿಯ ಅವಧಿ ಮುಗಿದಿತ್ತು. ಐದಾರು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸಮಿತಿಯನ್ನು ಮುಂದುವರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಭಕ್ತರಿಂದ ದೇಣಿಗೆ ರೂಪದಲ್ಲಿ ಸಂಗ್ರಹವಾದ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಬದಲಾದ ವಿದ್ಯಮಾನದಲ್ಲಿ, ಪುನರ್‌ನಿರ್ಮಾಣವನ್ನು ನಾವೇ ಮಾಡಿ ಸರ್ಕಾರಕ್ಕೆ ದೇಗುಲವನ್ನು ವಾಪಸ್ ಕೊಡುತ್ತೇವೆ ಸಮಿತಿ ಹೇಳಿದೆ. ಅದಕ್ಕೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆಯೂ ದೊರೆತಿದೆ. ಅನುಷ್ಠಾನದ ಏಜೆನ್ಸಿಯ ಹೊಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಬಿಡಿಸಿ, ಸಮಿತಿಗೇ ಕೊಟ್ಟು, ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಲು ಅನುವು ಮಾಡಬೇಕು ಎಂದೂ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ’ ಎಂದು ತಿಳಿದುಬಂದಿದೆ.
‘ಸಚಿವರು, ಸರ್ಕಾರ ಹೆಚ್ಚಿನ ಗಮನಹರಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅನುಕೂಲ ಮಾಡಿಕೊಡಬೇಕು’ ಎಂಬುದು ಭಕ್ತರ ಬೇಡಿಕೆ.
ಈ ವರ್ಷದಿಂದ ಕೆಲಸ ಚುರುಕು ಪಡೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರವಾಸೋ ದ್ಯಮ ಇಲಾಖೆಯಿಂದ ₹2 ಕೋಟಿ ಕೊಡಿಸಿದ್ದಾರೆ. ಈಗ ಅನುದಾನದ ಕೊರತೆ ಇಲ್ಲ–ಸುರೇಶ್ ಆಚಾರ್, ತಹಶೀಲ್ದಾರ್ ತಿ.ನರಸೀಪುರ
ಜಾತ್ರೆಗೆ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ–ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ
‘ಇತ್ತೀಚೆಗೆ ಚುರುಕು ಪಡೆದಿದೆ’
‘ದೇವಾಲಯದ ಜೀರ್ಣೋದ್ಧಾರ ಕಾರ್ಯ ಈಗ ಚುರುಕು ಪಡೆದುಕೊಂಡಿದೆ. 40 ಮಂದಿ ನಿತ್ಯವೂ ಕೆಲಸ ಮಾಡುತ್ತಿದ್ದಾರೆ. ಎರಡೂ ದೇವಸ್ಥಾನಗಳನ್ನು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಪೂರ್ಣಗೊಳಿಸಿ ಉದ್ಘಾಟಿಸಲು ಯೋಜಿಸಲಾಗಿದೆ. ಚಂದ್ರಶಾಲೆಯ ನಿರ್ಮಾಣಕ್ಕೆ ನಂತರ ಒಂದು ವರ್ಷ ಬೇಕಾಗುತ್ತದೆ’ ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಂದೀಶ್ ಹಂಚೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಬಹಳ ಸಹಕಾರ ಕೊಡುತ್ತಿದ್ದಾರೆ. ಸಮಿತಿಯನ್ನು ಪುನರ್‌ರಚಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದರು.
ಅಭಿವೃದ್ಧಿ ಸಮಿತಿ ರಚನೆ
ದೇವಸ್ಥಾನವು ಶಿಥಿಲಗೊಂಡಿರುವುದರಿಂದ ಪುನರ್ ನಿರ್ಮಾಣಕ್ಕೆ ನಿರ್ಧರಿಸಿ ಭ್ರಮರಾಂಭ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಮೂಲ ದೇವರ ವಿಗ್ರಹಗಳನ್ನು ಹಾಗೆಯೇ ಉಳಿಸಿಕೊಂಡು ದೇವಸ್ಥಾನವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಹೊಸದಾಗಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಮೊದಲ ಹಂತದಲ್ಲಿ ಭ್ರಮರಾಂಭಾ ದೇವಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ಕೃಷ್ಣ ಶಿಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವನ್ನು ಬೀಳಿಕಲ್ಲುಗಳಲ್ಲಿ ನಿರ್ಮಿಸಲಾಗುತ್ತದೆ. 2ನೇ ಹಂತದಲ್ಲಿ ಚಂದ್ರಶಾಲೆ ಹಾಗೂ 3ನೇ ಹಂತದಲ್ಲಿ ರಾಜಗೋಪುರ ನಿರ್ಮಾಣ ನಡೆಸಬೇಕು ಎಂದು ಯೋಜಿಸಲಾಗಿದೆ.
ಎರಡೂ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ₹ 16 ಕೋಟಿ ವೆಚ್ಚವಾಗಲಿದೆ. ₹ 10 ಕೋಟಿ ವೆಚ್ಚದಲ್ಲಿ ಬೆಟ್ಟಕ್ಕೆ ಸುರಕ್ಷಿತ ಗೋಡೆ ಹಾಗೂ ರಥ ಬೀದಿ ನಿರ್ಮಾಣಕ್ಕೆ ಸಮಿತಿಯು ನಿರ್ಧರಿಸಲಾಗಿದೆ. ಸಮಿತಿಯು ಭಕ್ತರಿಂದ ದೇಣಿಗೆ ಸಂಗ್ರಹಿಸಲು ಸರ್ಕಾರ ಅನುಮತಿ ನೀಡಿದೆ. ಸಮಿತಿಯು ಪಾರದರ್ಶಕವಾಗಿ ಕೆಲಸ ಮಾಡಲು ನೇತೃತ್ವವನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.