ADVERTISEMENT

ಕಲಾಕೃತಿಗಳು ಸೃಷ್ಟಿಸಿದ ಭಾವಭಿತ್ತಿ

ಎಸ್‌.ಆರ್.ಅಯ್ಯಂಗಾರ್ ಅವರ ಚಿತ್ರಗಳ ‍ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:10 IST
Last Updated 24 ಜುಲೈ 2025, 5:10 IST
ಮೈಸೂರಿನ ಒಡೆಯರ್ ಸ್ಕೂಲ್ ಆಫ್‌ ಆರ್ಕಿಟೆಕ್ಚರ್‌ನಲ್ಲಿ ಎಸ್‌.ಆರ್.ಅಯ್ಯಂಗಾರ್ ಅವರ ಚಿತ್ರಕಲಾಕೃತಿಗಳ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಿದ ಕಲಾವಿದ ಗಂಜೀಫ ರಘುಪತಿ ಭಟ್, ಕಲಾಕೃತಿಗಳನ್ನು ವೀಕ್ಷಿಸಿದರು. ಅವನೀಶ್‌ ಪಾಠಕ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ 
ಮೈಸೂರಿನ ಒಡೆಯರ್ ಸ್ಕೂಲ್ ಆಫ್‌ ಆರ್ಕಿಟೆಕ್ಚರ್‌ನಲ್ಲಿ ಎಸ್‌.ಆರ್.ಅಯ್ಯಂಗಾರ್ ಅವರ ಚಿತ್ರಕಲಾಕೃತಿಗಳ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಿದ ಕಲಾವಿದ ಗಂಜೀಫ ರಘುಪತಿ ಭಟ್, ಕಲಾಕೃತಿಗಳನ್ನು ವೀಕ್ಷಿಸಿದರು. ಅವನೀಶ್‌ ಪಾಠಕ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ    

ಮೈಸೂರು: ಖ್ಯಾತ ಚಿತ್ರ ಕಲಾವಿದ ಎಸ್‌.ಆರ್.ಅಯ್ಯಂಗಾರ್ ಅವರು ರಚಿಸಿದ್ದ ಅಪರೂಪದ ಕಲಾಕೃತಿಗಳನ್ನು ನೋಡಿದ ವಿದ್ಯಾರ್ಥಿಗಳು, ತಮ್ಮ ಭಾವಭಿತ್ತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡರು. ಚಿತ್ರಗಳ ವಿಶಿಷ್ಟತೆಯನ್ನು ಪ್ರಾಧ್ಯಾಪಕರಿಂದ ಅರಿತು ವಿಶ್ಲೇಷಿಸಿದರು. 

ಇಲ್ಲಿನ ಒಡೆಯರ್ ಸ್ಕೂಲ್ ಆಫ್‌ ಆರ್ಕಿಟೆಕ್ಚರ್‌ನಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಚಿತ್ರಕಲಾಕೃತಿಗಳ ಪ್ರದರ್ಶನವು ಅಪರೂಪದ ಸಂವಾದಕ್ಕೆ ಸಾಕ್ಷಿಯಾಯಿತು. ಮೈಸೂರು ಅರಮನೆಯ ಒಳಾಂಗಣದಲ್ಲಿನ ಕಲಾಕೃತಿಗಳನ್ನು ಸೃಷ್ಟಿಸಿದ ಎಸ್‌.ಆರ್.ಅಯ್ಯಂಗಾರ್‌ ಅವರ ಜೀವನ ಸಾಧನೆಯ ಪರಿಚಯವನ್ನು ವಿದ್ಯಾರ್ಥಿಗಳು ಮಾಡಿಕೊಂಡರು. 

ಇದ್ದಿಲಿನಲ್ಲಿ 1926ರಲ್ಲಿ ಬರೆದ ‘ಗಹನವಾಗಿ ಯೋಚಿಸುತ್ತಿರುವ ವ್ಯಾಪಾರಿ’, ಜಲವರ್ಣದ ‘ನೀರಿನಲ್ಲಿ ಮಿನುಗುವ ಮೇಲುಕೋಟೆಯ ದೇಗುಲದ ಬಿಂಬ’, ‘ನಾಗರಿಕರನ್ನು ನದಿ ದಾಟಿಸುತ್ತಿರುವ ಅಂಬಿಗರು’, ‘ಕಾಡನ್ನು ಸೀಳಿದ ಹಾದಿ’, ‘ಭತ್ತದ ಬಯಲಿನ ಗದ್ದೆಗಳು’, ‘ಹಾಯಿ ದೋಣಿ’ ಕಲಾಕೃತಿಗಳು ಸೆಳೆದವು. 

ADVERTISEMENT

ಸೀತಕ್ಕ ಅಯ್ಯಂಗಾರ್, ಆರ್ಯಮೂರ್ತಿ, ರಾಮನ್‌, ಪದ್ಮ ಸೇರಿದಂತೆ ಹಲವು ತೈಲಚಿತ್ರದ ವಿವಿಧ ವ್ಯಕ್ತಿಚಿತ್ರಗಳು, ಎಸ್‌.ಆರ್.ಅಯ್ಯಂಗಾರ್ ಅವರು ಬರೆದುಕೊಂಡ ತಮ್ಮದೇ ಭಾವಚಿತ್ರವೂ ವಿಸ್ಮಯಗೊಳಿಸಿತು. ಬಣ್ಣದ ಬಳಕೆಯಲ್ಲಿ ವಯಸ್ಸು, ಆಲೋಚನೆ ಹಾಗೂ ಭಾವವನ್ನು ಅನಾವರಣಗೊಳಿಸಿದ ಜಾಣ್ಮೆಯನ್ನು ವಿದ್ಯಾರ್ಥಿಗಳು ವಿಶ್ಲೇಷಿಸಿದರು. 

ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದ ಗಂಜೀಫ ರಘುಪತಿ ಭಟ್ ಮಾತನಾಡಿ, ‘ಎಸ್‌.ಆರ್.ಅಯ್ಯಂಗಾರ್ ಅವರ ಕಲಾಕೃತಿಗಳು ಶ್ರೇಷ್ಠವಾದವು. ಅವುಗಳ ವಿಶಿಷ್ಟತೆಯನ್ನು ಅರಿಯಲು ಪ್ರದರ್ಶನ ಏರ್ಪಡಿಸಿರುವುದು ಸ್ವಾಗತಾರ್ಹ’ ಎಂದರು. 

‘ಮೈಸೂರಿನಲ್ಲಿ ಕಲಾ ಸಂಸ್ಕೃತಿ ಉಳಿಸಬೇಕೆಂದರೆ ಅಗತ್ಯ ‍ಪ್ರೋತ್ಸಾಹ ಬೇಕಿದೆ. ಈ ಜಾಗದಲ್ಲಿ ಶಾಶ್ವತವಾದ ಗ್ಯಾಲರಿಯನ್ನು ಮಾಡಿದರೆ, ಹಿರಿಯ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು. 

ಸಹಾಯಕ ಪ್ರಾಧ್ಯಾಪಕ ಮಧ್ವೇಶ್‌ ಎನ್‌.ಪಾಂಡುರಂಗಿ, ಒಡೆಯರ್ ಸ್ಕೂಲ್ ಆಫ್‌ ಆರ್ಕಿಟೆಕ್ಚರ್‌ನ ಸಂಸ್ಥಾಪಕ ಸದಸ್ಯ ಬಿ.ಮಂಜುನಾಥ್, ಅನಿಮೇಷನ್ ಕಲಾವಿದ ಹಾಗೂ ಎಸ್‌.ಆರ್.ಅಯ್ಯಂಗಾರ್ ಮೊಮ್ಮಗ ಅವನೀಶ್‌ ಪಾಠಕ್ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.